ಬೆಳಗಾವಿ,ಜನವರಿ,18,2024(www.justkannada.in): ಕರ್ನಾಟಕದ ಬೆಳಗಾವಿ,ಕಾರವಾರ, ಕಲಬುರ್ಗಿ ಹಾಗೂ ಬೀದರ ಜಿಲ್ಲೆಗಳ 865 ಹಳ್ಳಿ ಪಟ್ಟಣಗಳ ಮರಾಠಿ ಭಾಷಿಕರಿಗಾಗಿ ತನ್ನ ಮಹಾತ್ಮಾ ಫುಲೆ ಜನಾರೋಗ್ಯ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದ ಮಹಾರಾಷ್ಟ್ರದ ಯೋಜನೆಗೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹಾಕಿದೆ.
“ನಾನು ಮರಾಠಿ ಭಾಷಿಕ”ಎಂದು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿಫಾರಸು ಪತ್ರ ಪಡೆಯುವ ಮರಾಠಿ ಭಾಷಿಕರಿಗೆ ಮಾತ್ರ ಈ ಯೋಜನೆಯು ಸೀಮಿತವಾಗಿತ್ತು. 2023ರ ಮಾರ್ಚ 2 ರಂದು ಮಹಾರಾಷ್ಟ್ರದ ಏಕನಾಥ ಶಿಂಧೆ ಸರಕಾರ ತೀರ್ಮಾನ ಕೈಗೊಂಡಿತ್ತಲ್ಲದೇ ಏಪ್ರಿಲ್ ನಲ್ಲಿ ಅಧಿಕೃತ ಆದೇಶ ಹೊರಡಿಸಿತ್ತು.
ಒಂಬತ್ತು ತಿಂಗಳ ನಂತರ ಇದೇ ಜನವರಿಯಲ್ಲಿ ಬೆಳಗಾವಿಯಲ್ಲಿ ನಾಲ್ಕು ಸೇವಾ ಕೇಂದ್ರಗಳನ್ನು ಆರಂಭಿಸಿದ್ದ ಎಂಇಎಸ್ ಘಟಕವು ಶಿಫಾರಸು ಪತ್ರಗಳನ್ನು ನೀಡಲು ಆರಂಭಿಸಿತ್ತು. ಕರ್ನಾಟಕದ ಹಿತಾಸಕ್ತಿಗೆ ಮಾರಕವಾಗುವ ಯೋಜನೆ ಜಾರಿಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ತೀವ್ರವಾಗಿ ವಿರೋಧಿಸಿ ಕಳೆದ ಗುರುವಾರ ಜನವರಿ 11 ರಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿನ್ನೆ ಶನಿವಾರ ನಾಲ್ಕು ಸೇವಾ ಕೇಂದ್ರಗಳನ್ನುಬಂದ್ ಮಾಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕ್ರಮವನ್ನು ರಾಜ್ಯದಾದ್ಯಂತದ ಕನ್ನಡ ಸಂಘಟನೆಗಳು ಸ್ವಾಗತಿಸಿ ಅಭಿನಂದಿಸಿದ್ದಾರೆ. ಅಲ್ಲದೇ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲರೂ ಸಹ ಜಿಲ್ಲಾಧಿಕಾರಿಗಳ ಕ್ರಮವನ್ನು ಶ್ಲಾಘಿಸಿದ್ದು ಶೀಘ್ರವೇ ಬೆಳಗಾವಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಭೆ ನಡೆಸುವದಾಗಿ ಕ್ರಿಯಾ ಸಮಿತಿಯ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
Key words: Implementation – Maharashtra-scheme –Karnataka- reined -Belagavi district administration- action