ಬೆಂಗಳೂರು,ಸೆ,3,2019(www.justkannada.in): ಆರ್ಥಿಕ ಹಿಂಜರಿತ ಸದ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿದೆ. ರಾಜ್ಯದ ಮಟ್ಟಿಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿಲ್ಲ. ಇದು ತಾತ್ಕಾಲಿಕ ಆರ್ಥಿಕ ಹಿಂಜರಿತ ಅಷ್ಟೇ. ಹಿಂಜರಿತ ಸಧ್ಯದಲ್ಲೇ ಅಂತ್ಯವಾಗುವ ನಿರೀಕ್ಷೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಹೊಸ ಕೈಗಾರಿಕಾ ನೀತಿ ಜಾರಿಗೆ ಮುಂದಾಗಿದ್ದೇವೆ. ಕೈಗಾರಿಕೆ ಅಂದ್ರೆ ಬೆಂಗಳೂರು ಕೇಂದ್ರಿತ ಅನ್ನುವ ಹಾಗಾಗಿದೆ. ಕೈಗಾರಿಕಾ ಅಭಿವೃದ್ಧಿ ಟು ಟೈರ್ ನಗರಗಳಿಗೂ ವಿಸ್ತರಣೆ ಆಗಬೇಕಿದೆ. ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳನ್ನೂ ಅಧ್ಯಯನ ಮಾಡ್ತಿದೀವಿ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ನೀತಿ ಜಾರಿ ಮಾಡ್ತೇವೆ ಎಂದರು.
ಹಿಂದಿನ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನಕ್ಕೆ ತೀರ್ಮಾನಿಸಿತ್ತು. ಸಿಎಂ ಜೊತೆ ಚರ್ಚಿಸಿ ಬಂಡವಾಳ ಹೂಡಿಕೆದಾರ ಸಮ್ಮೇಳನ ಬಗ್ಗೆ ನಿರ್ಧಾರ ಕೈಗೊಳ್ತೇವೆ. ಮುಂದಿನ ಜನವರಿಗೆ ಬಂಡವಾಳ ಹೂಡಿಕೆದಾರ ಸಮ್ಮೇಳನ ನಡೆಸುವ ಪ್ರಸ್ತಾಪ ಇದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರದಿಂದ ಸಿಬಿಐ, ಇಡಿ ದುರುಪಯೋಗ ಎಂಬ ಡಿಕೆ ಶಿವಕುಮಾರ್ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್, ಡಿಕೆಶಿ ಅವರಿಗೆ ಹಾಗೆ ಅನಿಸ್ತಿದೆ. ಅವರ ವಿರುದ್ಧ ತನಿಖೆ ನಡೀತಿದೆ. ಹಾಗಾಗಿ ಅವರಿಗೆ ಹಾಗನಿಸ್ತಿರಬಹುದು. ಅವರ ಈ ಭಾವನೆಗೆ ನಾವು ಏನೂ ಮಾಡಕ್ಕಾಗಲ್ಲ. ಇಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳು. ಕೇಂದ್ರದಿಂದ ಈ ಸಂಸ್ಥೆಗಳ ದುರುಪಯೋಗ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಜಿಂದಾಲ್ ಗೆ ಭೂಮಿ ಕೊಟ್ಟ ವಿಚಾರ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಹಿಂದಿನ ಸರ್ಕಾರ ಸಂಪುಟ ಉಪಸಮಿತಿ ರಚಿಸಿತ್ತು. ಅದರ ವರದಿ ಏನು ಅಂತ ನೋಡಬೇಕು. ಪರಿಸ್ಥಿತಿ ಏನಿದೆ ಅಂತ ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ತೀವಿ. ಸರ್ಕಾರ ರಚನೆಯಾಗಿ ಒಂದು ತಿಂಗಳಾಗದೆಯಷ್ಟೇ. ನಾನು ಇಲಾಖೆ ವಹಿಸಿಕೊಂಡು ಒಂದು ವಾರ ಆಗಿದೆ. ಜಿಂದಾಲ್ ವಿಚಾರದಲ್ಲಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ವಿಳಂಬ ಆಗಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಮಧ್ಯಂತರ ಚುನಾವಣೆಯಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಯಾವಾಗ ಭವಿಷ್ಯಗಾರರು ಆದರು ಗೊತ್ತಿಲ್ಲ. ಸರ್ಕಾರ ಹೋದ್ಮೇಲೆ ಅವ್ರು ಖಾಲಿ ಆಗಿದ್ದಾರೆ. ಹೀಗಾಗಿ ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
Key words: implementing – new industrial –policy-Statement – Minister-Jagdish Shettar.