ಮೈಸೂರು,ಆಗಸ್ಟ್,30,2023(www.justkannada.in): ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾರಿತ್ರಿಕವಾದ ಗೃಹಲಕ್ಷ್ಮಿ ಯೋಜನೆಯನ್ನ ಉದ್ಘಾಟಿಸಲಾಯಿತು. ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.
ಈ ಉದ್ಘಾಟನಾ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ನಾರಿಯರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳದಿಂದಲೂ ಸಾವಿರಾರು ನಾರಿಯರು, ಗೃಹಿಣಿಯರು “ಗೃಹಲಕ್ಷ್ಮಿ” ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ
ಶ್ರಮಿಕ ವರ್ಗದ, ದುಡಿಯುವ ವರ್ಗಗಳ ಮಹಿಳೆಯರು, ಮಹಿಳಾ ಕಾರ್ಮಿಕರು ಮಹಿಳಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂಸ್ಫೂರ್ತಿಯಿಂದ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವುದು ವಿಶೇಷ.
ಕಾಲೇಜು ವಿದ್ಯಾರ್ಥಿನಿಯರು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ತಮ್ಮ ವಿದ್ಯಾಭ್ಯಾಸಕ್ಕೆ ಬಹಳ ದೊಡ್ಡ ನೆರವಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಗದುದ್ದಕ್ಕೂ ಅಭಿನಂದನೆ, ಧನ್ಯವಾದ ಹೇಳುವ ಬ್ಯಾನರ್ ಗಳನ್ನು ಹಿಡಿದು ಸಮಾವೇಶಕ್ಕೆ ಆಗಮಿಸಿದ್ದರು.
ಬೆಳಗ್ಗೆ 10 ಗಂಟೆ ವೇಳೆಗೇ ಮಹಾರಾಜ ಗ್ರೌಂಡ್ ನಲ್ಲಿ ಮಹಿಳಾ ಜನಸ್ತೋಮವೇ ತುಂಬಿ ತುಳುಕುತ್ತಿತ್ತು. ಪಿಂಕ್ ಬಣ್ಣದ ಧಿರಿಸಿನಲ್ಲಿ ಸಮಾವೇಶದ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರು ಕಂಗೊಳಿಸಿದರು.
ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಚರಿತ್ರೆಯಲ್ಲಿ ಏಕ ಕಾಲಕ್ಕೆ, ಪ್ರತೀ ತಿಂಗಳು ಒಂದೂವರೆ ಕೋಟಿಗೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಸರ್ಕಾರಿ ಚಳವಳಿಯ ಚೈತನ್ಯ ಪಡೆದುಕೊಂಡ ಕಾರ್ಯಕ್ರಮ ಇದಾಗಿತ್ತು.
Key words: Inauguration -ceremony – Grihalahakshmi Yojana-mysore