ಹುಬ್ಬಳ್ಳಿ,ಡಿಸೆಂಬರ್,27,2022(www.justkannada.in): ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಮಂಗಳವಾರ ಉದ್ಘಾಟಿಸಿದರು.
ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ಜಗದೀಶ್ ಶೆಟ್ಟರ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಉಪಸ್ಥಿತರಿದ್ದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉಚಿತ ಸಹಾಯವಾಣಿಗೂ (ಟೋಲ್ ಫ್ರೀ ನಂ: 155267) ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಇದರ ಮೂಲಕ, ಅಗತ್ಯವಿರುವವರಿಗೆ ಉದ್ಯಮಶೀಲತೆಗೆ ಸಂಬಂಧಿಸಿದ ಎಲ್ಲ ಮಾರ್ಗದರ್ಶನ ಮಾಡಲಾಗುವುದು. ಇಡೀ ರಾಜ್ಯದಿಂದ ಬರುವ ಕರೆಗಳನ್ನು ಇಲ್ಲಿ ನಿರ್ವಹಿಸಲಾಗುವುದು ಎಂದು ಸಚಿವ ಅಶ್ವತ್ ನಾರಾಯಣ್ ವಿವರಿಸಿದರು.
“ಈ ನೂತನ ಕೇಂದ್ರದಲ್ಲಿ ಒಟ್ಟು 60 ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸುಗಳಿವೆ. ಇದರಿಂದ ಸ್ಥಳೀಯ ಯುವಜನರು ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ಮೊದಲ ಮೂರು ಕೈಗಾರಿಕಾ ಕ್ರಾಂತಿಗಳ ಲಾಭದಿಂದ ವಂಚಿತವಾದ ನಾವು ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ತಪ್ಪಿಸಿಕೊಳ್ಳಬಾರದು” ಎಂದರು.
ಸದ್ಯಕ್ಕೆ ಸೆಮಿಕಂಡಕ್ಟರ್ ಮತ್ತು ಚಿಪ್ ತಯಾರಿಕೆಯಲ್ಲಿ ತೈವಾನ್ ಮುಂಚೂಣಿಯಲ್ಲಿದೆ. ಈಗ ರಾಜ್ಯದಲ್ಲಿ ಇವೆರಡೂ ಕ್ಷೇತ್ರಗಳತ್ತ ಆದ್ಯ ಗಮನ ಹರಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಇದರಲ್ಲಿ ಅಗ್ರಸ್ಥಾನವನ್ನು ಅಲಂಕರಿಸಲಿದೆ ಎಂದು ಅವರು ನುಡಿದರು.
ಇಡೀ ದೇಶದಲ್ಲಿ ರಾಜ್ಯದಲ್ಲಿ ಮಾತ್ರ ತಾಂತ್ರಿಕೇತರ ಕೋರ್ಸುಗಳ ವಿದ್ಯಾರ್ಥಿಗಳಿಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇ ಇದನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಆತ್ಮನಿರ್ಭರ ಭಾರತದ ನಿರ್ಮಾಣ ಇಂದಿನ ಗುರಿಯಾಗಿದೆ. ಇದಕ್ಕೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕೌಶಲ್ಯಾಭಿವೃದ್ಧಿ ಅತ್ಯಗತ್ಯವಾಗಿವೆ ಎಂದು ಅವರು ಪ್ರತಿಪಾದಿಸಿದರು.
Key words: Inauguration – GTTC- Multi-Skill -Development -Center -Hubli.