ಮೈಸೂರು,ಫೆಬ್ರವರಿ,8,2021(www.justkannada.in): ಮೈಸೂರಿನ ಬಂಡಿಪಾಳ್ಯ ಎಪಿಎಂಸಿಗೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅನೇಕ ರೈತಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರ ಸಹ ಭತ್ತ, ಗೋಧಿ ಸೇರಿದಂತೆ ಅನೇಕ ಆಹಾರ ಧಾನ್ಯಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರದಿಂದಲೂ ರೈತರಿಗೆ ಬೆಂಬಲ ಬೆಲೆ ನೀಡುತ್ತಿದ್ದು, ರಾಜ್ಯದ ಹಲವೆಡೆ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇನ್ನು ಎಪಿಎಂಸಿಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರ ಸಹ ಈ ಸಾಲಿನ ಬಜೆಟ್ ನಲ್ಲಿ ಎಪಿಎಂಸಿಗಳ ಉನ್ನತೀಕರಣಕ್ಕೆ ಅನುದಾನ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಸಹ ಎಪಿಎಂಸಿಗಳ ಮೂಲಕ ರೈತರಿಗೆ ಮುಟ್ಟಿಸಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಸಚಿವರು ತಿಳಿಸಿದರು.
19.99 ಲಕ್ಷ ರೈತರಿಗೆ 12975.34 ಕೋಟಿ ರೂಪಾಯಿ ಸಾಲ…
ಕೋವಿಡ್ ನಡುವೆಯೂ ರೈತರಿಗೆ ಬೆಳೆ ಸಾಲಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಹಕಾರ ಇಲಾಖೆ ಮುಖಾಂತರ ರೈತರಿಗೆ ಸಾಲ ನೀಡಿಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಒಟ್ಟಾರೆ 24.50 ಲಕ್ಷ ರೈತರಿಗೆ 15300 ಕೋಟಿ ರೂಪಾಯಿ ಸಾಲ ನೀಡುವ ಗುರಿಯಲ್ಲಿ ಈಗಾಗಲೇ 19,99,508 ರೈತರಿಗೆ 12975.34 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ಮಾಹಿತಿ ನೀಡಿದರು.
Key words: Inauguration -Millet -Support -Price Center-Minister -ST Somashekhar