ಮೈಸೂರು, ನವೆಂಬರ್ 26, 2023 (www.justkannada.in): ಯಾವುದೇ ಸಂಸ್ಥೆ ಹುಟ್ಟು ಹಾಕುವುದು ಸುಲಭ. ಅದು ನಿರಂತರವಾಗಿ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಸಂಸ್ಥೆ ಹುಟ್ಟುಹಾಕಿದವರ ಮೂಲ ಉದ್ದೇಶವಾಗಿರಬೇಕು ಎಂದು ಲಾಗೈಡ್ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕ, ಹಿರಿಯ ವಕೀಲ ಹೆಚ್.ಎನ್.ವೆಂಕಟೇಶ್ ತಿಳಿಸಿದರು.
ಮೈಸೂರಿನ ಅಶೋಕಪುರಂನಲ್ಲಿ ಆರಂಭವಾಗಿರುವ ಡಾ.ಭೀಮ ರಾವ್ ಸ್ಟಡಿ ಸೆಂಟರ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಒಂದು ಸಂಸ್ಥೆ ದೀರ್ಘ ಕಾಲ ಇರಬೇಕಾದರೆ ಸಂಸ್ಥೆಯಲ್ಲಿರುವ ಪದಾಧಿಕಾರಿಗಳಲ್ಲಿ ಸೇವಾ ಮನೋಭಾವ ಇರಬೇಕು. ಆಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಡಾ.ಭೀಮ ರಾವ್ ಸ್ಟಡಿ ಸೆಂಟರ್ ಉದ್ಘಾಟನೆ ಮಾಡುತ್ತಿರುವುದು ನನ್ನ ಸೌಭಾಗ್ಯ. ಇಂದು ಸಂವಿಧಾನ ಸಮರ್ಪಣಾ ದಿನವಾಗಿದೆ. ಡಾ.ಭೀಮ ರಾವ್ ಸ್ಟಡಿ ಸೆಂಟರ್ ಧೀರ್ಘ ಕಾಲ ಉಳಿಯುವುದು ಅದಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಲಾಗೈಡ್ ಕಾನೂನು ಮಾಸಪತ್ರಿಕೆ ವತಿಯಿಂದ ಸ್ಟಡಿ ಸೆಂಟರ್ ಮೂಲಭೂತ ಸೌಕರ್ಯಕ್ಕೆ 25 ಸಾವಿರ ರೂ. ದೇಣಿಗೆ ನೀಡುತ್ತಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್.ವೆಂಕಟರಾಮ್ ಜೀ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಮಾತೃಭಾಷೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯ ಮೇಲೂ ಉತ್ತಮ ಹಿಡಿತವಿರಬೇಕು. ಏಕೆಂದರೆ ಇಂದು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ಹೆಚ್ಚಾಗಿದೆ. ಅದ್ದರಿಂದ ನಮ್ಮ ಅಶೋಕಪುರಂನ ಯುವಕರು ಹಾಗೂ ಯುವ ವಕೀಲರು ಸೇರಿ ಮಾಡಿರುವ ಈ ಸಂಸ್ಥೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್ ಉಪಾಧ್ಯಕ್ಷ ಸಿದ್ದೇಗೌಡ, ನಿವೃತ್ತ ಅಭಿಯೋಜಕರಾದ ಧರಣಣ್ಣನವರ್ ಹಾಗೂ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ ಡಾ ರಮೇಶ್ ಬಾಬು, ಅಭಿಷೇಕ್, ಜಯರಾಜ್ ಹಾಗೂ ವರುಣ್ ಬುದ್ದ ವಕೀಕರು ಹಾಗೂ ಸಂಸ್ಥೆಯ ಅಧ್ಯಕ್ಷರು ಆದ ಜಯಶಂಕರ್, ಹಿರಿಯ ವಕೀಲರಾದ ಎನ್ ಬಿ ರಘು, ಗಿರೀಶ್ ಇದ್ದರು.