ಮೈಸೂರು,ಜೂನ್,2,2023(www.justkannada.in): ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭಗಳಲ್ಲಿ ನಡೆದ ಅಂದಿನ ಘಟನೆಗಳಿಂದ ಸಂವಿಧಾನದ ಅಣಕವಾಗಿವೆ. ಈ ಕಾರ್ಯಕ್ರಮ ಮೋದಿಯವರ ಪಟ್ಟಾಭಿಷೇಕದಂತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್. ವಿಶ್ವನಾಥ್ , ನೂತನ ಸಂಸತ್ ಭವನದ ಉದ್ಘಾಟನೆಯು ಪ್ರಧಾನಿಯವರ ಸಮ್ಮುಖದಲ್ಲಿ ಸಂವಿಧಾನದ ಅಣಕವಾಗಿದೆ. ಸಂವಿಧಾನ ಬರೆದುಕೊಟ್ಟಿರುವ ಅಂಬೇಡ್ಕರ್ ಹೆಸರನ್ನು ಅಂದು ಪ್ರಸ್ತಾಪಿಸಲಿಲ್ಲ. ದೇಶದ ಪ್ರಥಮ ಪ್ರಜೆ ಹಾಗೂ ಸೇನೆಯ ಮೂರು ವಿಭಾಗಗಳ ತುಕಡಿಗಳಿಗೆ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯನ್ನು ಆಹ್ವಾನಿಸದೇ ಕಡೆಗಣಿಸಲಾಗಿದೆ. ಒಂದರ್ಥದಲ್ಲಿ ಮೋದಿಯವರ ಪಟ್ಟಾಭಿಷೇಕದಂತೆ ಕಾರ್ಯಕ್ರಮ ನಡೆದಿದೆ. ಎಲ್ಲವೂ ನಾನೇ ಎಂದು ಬಿಂಬಿಸಿಕೊಳ್ಳಲು ಮೋದಿ ಈ ರೀತಿ ಮಾಡಿದ್ದಾರೆ. ಈ ಮೂಲಕ ದೇಶದ 140ಕೋಟಿಗೂ ಹೆಚ್ಚು ಜನರಿಗೆ ಅಪಮಾನ ಮಾಡಿದ್ದಾರೆ. ಎಲ್ಲಿ ರಾಷ್ಟ್ರ ಲಾಂಛನ ಇರಬೇಕಿತ್ತೋ ಅಲ್ಲಿ ಧರ್ಮ ಲಾಂಛನ ಇರಿಸಿದ ಪ್ರಧಾನಿ ಮೋದಿಯ ಕ್ರಮ ಸರಿಯಲ್ಲ. ಎಲ್ಲಾ ಧರ್ಮೀಯರನ್ನು ಒಳಗೊಂಡ ಸಂವಿಧಾನಕ್ಕೆ ಅಪಚಾರ ಮಾಡಲಾಗಿದೆ. ನೂತನ ಸಂಸತ್ ಭವನದಲ್ಲಿ ಹೋಮ ಹವನ ನಡೆಸುವ ಮೂಲಕ ಮತ್ತೆ ಪುರೋಹಿತಶಾಹಿ ವ್ಯವಸ್ಥೆಯತ್ತ ಕೊಂಡೊಯ್ಯಲಾಗುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದೆ. ಪ್ರಧಾನಮಂತ್ರಿ ಅವರಿಂದಲೇ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದು ಕಿಡಿಕಾರಿದರು.
ಅರಸರ ಕಾಲದಲ್ಲಿ ರಾಜ ದಂಡವನ್ನು ಜನರನ್ನು ಹೆದರಿಸಿ ಆಡಳಿತ ನಡೆಸಲು ಬಳಸಲಾಗುತ್ತಿತ್ತು. ಆದರೆ ಈಗ ರಾಜದಂಡವನ್ನು ಸಂಸತ್ ನಲ್ಲಿ ಪ್ರತಿಷ್ಠಾಪಿಸುವ ಅಗತ್ಯವಿರಲಿಲ್ಲ. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು .
ಮತ್ತೆ ಪಠ್ಯಪುಸ್ತಕ ಪರಿಷ್ಕರಣೆಗೆ ಹೆಚ್.ವಿಶ್ವನಾಥ್ ಆಕ್ಷೇಪ.
ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಎಂಎಲ್ ಸಿ ಎಚ್ ವಿಶ್ವನಾಥ್, ಶಾಲೆಗಳು ಈಗಾಗಲೇ ಆರಂಭವಾಗಿವೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಆತುರ ತೋರಬಾರದು. ಪಠ್ಯಪುಸ್ತಕ ಪರಿಷ್ಕರಣೆಯಿಂದ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ತೊಂದರೆಯಾಗಬಾರದು. ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದೇ ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗೆ ದಾವೂದ್ ಇಬ್ರಾಹಿಂ ಜೊತೆ ನಂಟು
ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗೆ ದಾವೂದ್ ಇಬ್ರಾಹಿಂ ಜೊತೆ ನಂಟಿದೆ. ದಾವೂದ್ ಇಬ್ರಾಹಿಂಗೆ ಬ್ರಿಜ್ ಭೂಷಣ್ ಸಿಂಗ್ ಕ್ಲೋಸ್ ಅಸೋಸಿಯೇಟ್ಸ್ ಆಗಿದ್ದಾನೆ. ಅಂತವನ ರಕ್ಷಣೆಗೆ ಬಿಜೆಪಿ ನಿಂತಿರುವುದು ಸರಿಯಾದ ಕ್ರಮವಲ್ಲ. ಸಂಸತ್ ನಲ್ಲಿ ರಾಜದಂಡ ಪ್ರತಿಷ್ಠಾಪಿಸಿ, ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರ ದಂಡ ಪ್ರಯೋಗಿಸಲಾಗಿದೆ. ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಚ್ ವಿಶ್ವನಾಥ್ ಆಗ್ರಹಿಸಿದರು.
Key words: inauguration -Parliament House – mockery – Constitution-H. Vishwanath