ಬೆಂಗಳೂರು, ಡಿಸೆಂಬರ್,5,2022 (www.justkannada.in): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರದಂದು ಅಂತಾರಾಷ್ಟ್ರೀಯ ದಿವ್ಯಾಂಗರ ದಿನಾಚರಣೆ ಅಂಗವಾಗಿ ಎರಡು ದಿವ್ಯಾಂಗಿಗಳು ನಿರ್ವಹಿಸುವ ಹೋಟೆಲ್ ಗಳನ್ನು ಉದ್ಘಾಟಿಸಲಾಯಿತು.
ವಿಮಾನ ನಿಲ್ದಾಣದ ಆವರಣದ ಒಳಗೆ ಇರುವ ಈ ಹೋಟೆಲ್ ಗಳನ್ನು, ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ತೊಂದರೆಗಳಿರುವಂತಹ ವಯಸ್ಕರಿಗೆ ಘನತೆಯನ್ನು ಒದಗಿಸಲು ಹಾಗೂ ಅಂತಹವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಸಲುವಾಗಿ ಶ್ರಮಿಸುತ್ತಿರುವ ಮಿಟ್ಟಿ ಕೆಫೆ ಎಂಬ ಲಾಭದ ಉದ್ದೇಶ ಇಲ್ಲದಿರುವಂತಹ ಸಂಸ್ಥೆಯೊಂದು ನಡೆಸಲಿದೆ.
ಈ ಕೆಫೆಗಳು ಬ್ರೇಲ್ ಸೂಚನೆಗಳು, ಮೂಕ ಭಾಷಾ ಅನುವಾಧಕರು, ಸಂದೇಗಳಿರುವ ಭಿತ್ತಿಚಿತ್ರಗಳು, ರ್ಯಾಂಪ್ ಗಳು ಲಭ್ಯವಿದ್ದು, ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿವೆ. ಸಿಬ್ಬಂದಿಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡಲಿದ್ದಾರೆ.
ಈ ಲಾಭದ ಉದ್ದೇಶ ಇಲ್ಲದಿರುವಂತಹ ಸಂಸ್ಥೆಯು ದೇಶದಾದ್ಯಂತ 25 ಕೆಫೆಗಳನ್ನು ನಡೆಸುತ್ತಿದ್ದು, ಎಲ್ಲಾ ಕಡೆ ದಿವ್ಯಾಂಗಿಗಳಿಗೆ ಉದ್ಯೋಗಗಳನ್ನು ನೀಡಿದೆ. “ನನ್ನ ಕುಟುಂಬದ ಹಣಕಾಸಿನ ಪರಿಸ್ಥಿತಿಯಿಂದಾಗಿ ನಾನು 5ನೇ ತರಗತಿಯಲ್ಲಿ ಇರುವಾಗಲೆ ಓದನ್ನು ನಿಲ್ಲಿಸಬೇಕಾಯಿತು. ನನಗೆ ಮೊದಲಿನಿಂದಲೂ ಕೆಲಸ ಮಾಡುವ ಬಯಕೆ ಇತ್ತು. ಆದರೆ ನನ್ನ ಶಾರೀರಿಕ ದುರ್ಬಲತೆಯಿಂದಾಗಿ ಅವಕಾಶ ಲಭಿಸಲಿಲ್ಲ. ಆದರೆ ಈಗ ನಾನು ಆರ್ಥಿಕವಾಗಿ ಸ್ಥಿರತೆಯನ್ನು ಪಡೆದುಕೊಂಡಂತಾಗಿದೆ.” ಎಂದು ಈ ಕೆಫೆಯೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೃತಿ ಕಳೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಮಿಟ್ಟಿ ಕೆಫೆಯ ನಿರ್ದೇಶಕಿ ಹಾಗೂ ಸಿಓಓ ಸ್ವಾತಿ ಡೊಕಾನಿಯಾ ಅವರು ಈ ಸಂದರ್ಭದಲ್ಲಿ ಮಾತನಾಡಿ, “ದಿವ್ಯಾಂಗಿಗಳ ಸಾಮರ್ಥ್ಯವನ್ನು ನಾವು ಜಗತ್ತಿಗೆ ತೋರಿಸಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿದೆ. ಜನರು ಏನು ಮಾಡಬಹುದು ಮತ್ತು ಏನನ್ನು ಮಾಡಲಾಗದು ಎಂಬ ಗ್ರಹಿಕೆಗಳಿಂದ ಜಗತ್ತು ನಡೆಯುತ್ತಿದೆ. ಈ ಗ್ರಹಿಕೆಗಳಿಂದಾಗಿ ಲಕ್ಷಾಂತರ ದಿವ್ಯಾಂಗಿಗಳು ಘನತೆಯುಳ್ಳ ಜೀವನದಿಂದ ವಂಚಿತರಾಗಿದ್ದಾರೆ,” ಎಂದು ವಿವರಿಸಿದರು.
ಮಿಟ್ಟಿ ಕೆಫೆಯ ಸ್ಥಾಪಕರಾದ ಅಲಿನಾ ಆಲಂ ಅವರು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿಯನ್ನು ನೀಡಿ ವಸತಿ ಸೌಕರ್ಯವನ್ನೂ ಒದಗಿಸುತ್ತಿರುವುದಾಗಿ ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಹರಿ ಮರಾರ್ ಅವರು ಮಾತನಾಡಿ, “ಈ ವ್ಯಾಪಾರದ ದೃಷ್ಟಿಕೋನ ಹಾಗೂ ಪರಿಕಲ್ಪನೆಯು ಸೇರ್ಪಡೆಗೊಳಿಸುವ ನಮ್ಮ ಬದ್ಧತೆಯನ್ನು ಸಾಬೀತುಪಡಿಸಿದಂತಾಗಿದೆ. ಇದು ಒಂದು ಅದ್ಭುತವಾದ ಪಾಲುದಾರಿಕೆಯ ಆರಂಭವಷ್ಟೇ, ಹಾಗೂ ನಾವು ದೀರ್ಘಾವಧಿ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ,” ಎಂದು ವಿವರಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Inauguration – two-hotels – Disabled -people- Kempegowda- International- Airport.