ಮಂಡ್ಯ ಸೇರಿ 8 ಕ್ಷೇತ್ರಗಳಿಗೆ ಹೆಚ್ಚಿನ ಭದ್ರತೆ

ಬೆಂಗಳೂರು:ಮೇ-18: ಮತ ಎಣಿಕೆ ದಿನ ಮಂಡ್ಯ ಸೇರಿ ರಾಜ್ಯದ ಹೈಟೆನ್ಷನ್ ಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸಿಆರ್​ಪಿಎಫ್ ಹಾಗೂ ಇತರ ರಾಜ್ಯ ಪೊಲೀಸರನ್ನು ಸಮರ್ಥವಾಗಿ ಬಳಸುವಂತೆ ಚುನಾವಣಾ ಆಯೋಗ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಮಂಡ್ಯ ಸೇರಿ ರಾಜ್ಯದ ಆರೇಳು ಕ್ಷೇತ್ರಗಳಲ್ಲಿ ಮತ ಎಣಿಕೆ ನಂತರ ಗಲಾಟೆಗಳು ನಡೆಯಬಹುದೆಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ, ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದಂತೆಯೇ ಪ್ರತಿಷ್ಠಿತ ಅಭ್ಯರ್ಥಿಗಳು ಸ್ಪರ್ಧಿಸಿರುವ ಮತ ಎಣಿಕೆ ಕೇಂದ್ರಗಳನ್ನು ಸೂಕ್ಷ್ಮ ಮತ ಎಣಿಕೆ ಕೇಂದ್ರಗಳೆಂದು ಪರಿಗಣಿಸಿ ಈ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಎಲ್ಲ ಕೇಂದ್ರಗಳಲ್ಲೂ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಿದ್ದು, ಸಿಎಂ ಪುತ್ರ ನಿಖಿಲ್ ಮತ್ತು ಸುಮಲತಾ ಅಂಬರೀಷ್ ಸ್ಪರ್ಧಿಸಿ ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸಿರುವ ತುಮಕೂರು, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿರುವ ಹಾಸನ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿರುವ ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು ಸೇರಿ ಒಟ್ಟು 8 ಕೇಂದ್ರಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ಒಂದು ದಿನ ಮುಂಚಿತವಾಗಿಯೇ ಭದ್ರತೆ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಕೂಡ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಂದು ದಿನ ಮೊದಲು, ಮತ ಎಣಿಕೆ ಮುಗಿದ ಮಾರನೇ ದಿನದವರೆಗೂ ನಿಷೇಧಾಜ್ಞೆ ಜಾರಿಗೆ ತರಬೇಕು, ಮದ್ಯ ಮಾರಾಟ ನಿಷೇದ ಇದ್ದರೂ ಕಳ್ಳತನದಲ್ಲಿ ಮಾರಾಟ ನಡೆಯುತ್ತಿರುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ.

ಮಂಡ್ಯದಲ್ಲಿ ಬುಕ್ಕಿಗಳ ಆಟ?

ಮಂಡ್ಯ ಲೋಕಸಭಾ ಕ್ಷೇತ್ರ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ದಂಧೆ ನಡೆಸಲು ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಬುಕ್ಕಿಗಳು ಮಂಡ್ಯಕ್ಕೆ ಆಗಮಿಸಿ ಅಜ್ಞಾತ ಸ್ಥಳಗಳಲ್ಲಿ ಉಳಿದುಕೊಂಡು ವ್ಯವಹಾರ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಈ ಸಂಬಧ ಬೆಂಗಳೂರಿನ ಸಿಸಿಬಿ ಪೊಲೀಸರು ನಗರಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಕೃಪೆ:ವಿಜಯವಾಣಿ

ಮಂಡ್ಯ ಸೇರಿ 8 ಕ್ಷೇತ್ರಗಳಿಗೆ ಹೆಚ್ಚಿನ ಭದ್ರತೆ
including-mandya-tight-security-for-8-constituency