bLi ಮೈಸೂರು,ಅಕ್ಟೋಬರ್, 12,2021(www.justkannada.in): ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕೆ ಆರ್ ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಗಮನ ನೀಡದ ಶಾಸಕ ರಾಮದಾಸ್ ಅವರು ಅಪರಾಧ ಮುಕ್ತ ಕ್ಷೇತ್ರ ಮಾಡುತ್ತೇನೆಂದು ಹೇಳುತ್ತಿರುವುದು ನಗೆಪಾಟಲಿನ ವಿಷಯವಾಗಿದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್, ಮೊನ್ನೆ ತನ್ನ ಪಾಡಿಗೆ ಹೋಗುತ್ತಿದ್ದ ಅಮಾಯಕ ಯುವಕನನ್ನು ಕೊಲೆ ಮಾಡಲಾಗಿದೆ. ವಿದ್ಯಾರಣ್ಯಪುರಂ ಶೂಟೌಟ್, ಚಾಮುಂಡಿ ಬೆಟ್ಟದ ತಪ್ಪಲಿನ ಬಳಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಘಟನೆಗಳು ಮಾಸುವ ಮುನ್ನವೇ ಯುವಕನ ಕೊಲೆ ನಡೆದಿರುವುದು ಆತಂಕಕಾರಿಯಾಗಿದೆ. ಜೋಡಿ ಕೊಲೆ ನಡೆದಿದ್ದ ಅನತಿ ದೂರದಲ್ಲೇ ಇದೀಗ ಯುವಕನ ಕೊಲೆಯಾಗಿದೆ. ಕೆ ಆರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ 9 ಕೊಲೆಗಳಾಗಿವೆ, 18 ಸರಗಳ್ಳತನ ಪ್ರಕರಣಗಳು ನಡೆದಿವೆ. ಪರಿಣಾಮ ಮಹಿಳೆಯರು, ವಯೋ ವೃದ್ದರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈ ಬಗ್ಗೆ ಗಮನ ನೀಡದ ಶಾಸಕ ರಾಮದಾಸ್ ರವರು ಅಪರಾಧ ಮುಕ್ತ ಕ್ಷೇತ್ರ ಮಾಡುತ್ತೇನೆಂದು ಹೇಳುತ್ತಿರುವುದು ನಗೆಪಾಟಲಿನ ವಿಷಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕನಕಗಿರಿ ಹಾಗೂ ಗುಂಡೂರಾವ್ ನಗರದ ನಡುವೆ ಇರುವ ತೋಟದಲ್ಲಿ ನಿರಂತರವಾಗಿ ಯುವಕರ ಗುಂಪು ಗಾಂಜಾ ಸೇವನೆಯಲ್ಲಿ ನಿರತವಾಗಿರುತ್ತದೆ. ಪ್ರತಿನಿತ್ಯ ಸುಮಾರು 100 ಮಂದಿಯಾದರೂ ಆ ಜಾಗದಲ್ಲಿ ಗಾಂಜಾ ಹೊಡೆಯುತ್ತಾರೆ. ಗಾಂಜಾ ಸೇವನೆ ಮಾಡುವ ಯುವಕರು ಮಚ್ಚು ಲಾಂಗುಗಳನ್ನು ಹಿಡಿದು ತಿರುಗಾಡುತ್ತಿದ್ದಾರೆ. ಈ ವಿಚಾರ ಸಂಬಂಧಿಸಿದ ತೋಟದ ಮಾಲೀಕರ ಗಮನಕ್ಕೆ ಬಂದಿಲ್ಲ. ತೋಟದ ಮಾಲೀಕರಿಗೂ ಯುವಕರು ಗಾಂಜಾ ಸೇವನೆ ಮಾಡುತ್ತಿರುವುದಕ್ಕೂ ಸಂಬಂಧವಿಲ್ಲ. ಗಾಂಜಾ ಸೇವನೆ ಮಾಡುವ ಯುವಕರನ್ನು ಹಿಡಿದು ಸೂಕ್ತ ಕ್ರಮ ಕೈಗೊಂಡರೆ ಅಪರಾಧ ಕೃತ್ಯಗಳು ತಾನಾಗಿಯೇ ಕಡಿಮೆಯಾಗುತ್ತವೆ. ಈ ವಿಚಾರದಲ್ಲಿ ಪೊಲೀಸರ ವೈಪಲ್ಯವೂ ಎದ್ದು ಕಾಣುತ್ತಿದೆ.ಈ ಬಗ್ಗೆ ಸಭೆ ಕರೆದು ಚರ್ಚಿಸದ ಶಾಸಕ ರಾಮದಾಸ್ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಎಂ.ಕೆ ಸೋಮಶೇಖರ್ ಹರಿಹಾಯ್ದರು.
ಕೆ.ಆರ್ ಕ್ಷೇತ್ರದಲ್ಲಿ ಮೋದಿ ಯುಗೋತ್ಸವ ಹೆಸರಿನಲ್ಲಿ ರಾಮದಾಸ್ ಉತ್ಸವ ನಡೆಯಿತು. ಇತ್ತೀಚೆಗೆ ನಡೆದದ್ದು ಮೋದಿ ಯುಗೋತ್ಸವವಲ್ಲ ರಾಮದಾಸ್ ಉತ್ಸವ. ಮೋದಿ ಹೆಸರೇಳಿದರೆ ಎಲ್ಲರೂ ಬರುತ್ತಾರೆಂದು ಮೋದಿ ಉತ್ಸವ ಎಂದು ಹೆಸರಿಡಲಾಗಿತ್ತು. ಆದರೆ ಮೋದಿ ಉತ್ಸವಕ್ಕೆ ಬಂದವರೆಲ್ಲಾ ರಾಮದಾಸ್ ರನ್ನು ಹಾಡಿ ಹೊಗಳಿದರು. ಯಡಿಯೂರಪ್ಪ ಜೈಲಿಗೆ ಹೋದಾಗ ಪಟಾಕಿ ಹೊಡೆದು ಸಂಭ್ರಮಿಸಿದ್ದವರು ಯಡಿಯೂರಪ್ಪ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ರಾಮದಾಸ್ ಕೂಡ ಕಾರಣರಾಗಿದ್ದರು. ಆದರೆ ಯಡಿಯೂರಪ್ಪ ಅವರ ಸಮುದಾಯದ ಓಟಿಗಾಗಿ ಅವರನ್ನು ಕರೆಸಿದ್ದರು ಎಂದು ಎಂ.ಕೆ ಸೋಮಶೇಖರ್ ಲೇವಡಿ ಮಾಡಿದರು.
Key words: Increase – criminal cases – KR constituency-Former CM-MK Somashekhar