ಮೈಸೂರು,ಜುಲೈ,11,2022(www.justkannada.in): ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಹೆಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಆಗ್ರಹಿಸಿದರು.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸಿ ಕಳೆದ ಹಲವಾರು ದಿನಗಳಿಂದ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಆದರೂ ಕೇವಲ ಭರವಸೆ ನೀಡುತ್ತಿರುವ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಮುಂದಾಗುತ್ತಿಲ್ಲ. ಸರ್ಕಾರ ಇದೇ ರೀತಿ ಧೋರಣೆ ಮುಂದುವರಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಎಸ್ ಸಿ, ಎಸ್ ಟಿ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ಹೆಚ್ಚಿಸುವಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಅನುಷ್ಟಾನಕ್ಕೆ ತರಬೇಕು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಈ ಬಗ್ಗೆ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಮೈಸೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಹಿನ್ನೆಲೆ, ಹೆಚ್.ಡಿ.ಕೋಟೆ ಕ್ಷೇತ್ರದಲ್ಲಿ ಕೆಲವು ಮನೆಗಳು ಕುಸಿತಗೊಂಡಿವೆ. ನನ್ನದು ಮೊದಲೇ ಹಿಂದುಳಿದ ಕ್ಷೇತ್ರ. ಮಣ್ಣಿನ ಗೋಡೆಯುಳ್ಳ ಮನೆಗಳು ಅಧಿಕ ಸಂಖ್ಯೆಯಲ್ಲಿವೆ. ಕಳೆದ ಒಂದು ವಾರದ ಮಳೆಯಿಂದ ಸಾಕಷ್ಟು ಮನೆಗಳು ಬಿದ್ದಿವೆ. ಈ ಕುರಿತು ಇದೇ 14ರಂದು ತಾಲ್ಲೂಕು ಅಧಿಕಾರಿಗಳ ಕೆಡಿಪಿ ಸಭೆ ಕರೆದಿದ್ದೇನೆ. ಬಳಿಕ ಮಳೆಯ ಅನಾಹುತದ ಬಗ್ಗೆ ಸಂಪೂರ್ಣ ವರದಿ ದೊರೆಯಲಿದೆ. ಇದೇ 13ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮಳೆ ಹಾನಿ ಸಂಬಂಧ ಸಭೆ ನಡೆಸಲಿದ್ದಾರೆ. ತಾಲೂಕಿನ ಮಳೆಹಾನಿ ಹಾಗೂ ಪರಿಹಾರ ಸಂಬಂಧ ಚರ್ಚೆ ಮಾಡುತ್ತೇನೆ ಎಂದು ಅನಿಲ್ ಚಿಕ್ಕಮಾದು ತಿಳಿಸಿದರು.
Key words: increase -reservation –SC,ST –community- MLA -Anil Chikkamadu.