ಸಿಡ್ನಿ,ನವೆಂಬರ್,27,2020(www.justkannada.in) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಚ್ರೇಲಿಯಾ ತಂಡ ಭರ್ಜರಿ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾಗೆ 375 ರನ್ ಗಳ ಬೃಹತ್ ಗುರಿ ನೀಡಿದ್ದು ಗುರಿ ಬೆನ್ನತ್ತಿದ ಕೊಹ್ಲಿ ಪಡೆಗೆ ಆರಂಭಿಕ ಆಘಾತ ಉಂಟಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 375 ರನ್ ಗುರಿ ಭಾರತ ತಂಡ ಸದ್ಯದ ಮಾಹಿತಿ ಪ್ರಕಾರ 13.1 ಓವರ್ ನಲ್ಲಿ 101 ರನ್ ಗೆ 4 ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಆಗಮಿಸಿದ ಶಿಖರ್ ಧವನ್ ಮತ್ತು ಮಾಯಂಕ್ ಅಗರ್ ವಾಲ್ ಅಬ್ಬರಿಸುವ ಸೂಚನೆ ನೀಡಿದರೂ ಸಹ ಮಾಯಂಕ್ ಅಗರ್ ವಾಲ್ 22 ರನ್ ಗಳಿಸಿದ್ದಾಗ ಹಜಲ್ ಹುಡ್ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಹೆಚ್ಚು ಹೊತ್ತು ನಿಲ್ಲದೇ 21 ರನ್ ಗೆ ಔಟ್ ಆಗಿದ್ದಾರೆ. ನಂತರ ಸ್ಕ್ರೀಜ್ ಗಿಳಿದ ಶ್ರೇಯಸ್ ಅಯ್ಯರ್ ಸಹ ಪೆವಿಲಿಯನ್ ಹಾದಿ ಹಿಡಿದರು. ಇದೀಗ ಕೆ.ಎಲ್ ರಾಹುಲ್ ಸಹ 12 ರನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಇನ್ನು ಆರಂಭಿಕರಾಗಿ ಆಗಮಿಸಿದ್ದ ಶಿಖರ್ ಧವನ್ ಸ್ಕ್ರೀಜ್ ನಲ್ಲಿದ್ದು ಭಾರತ ಜಯ ಸಾಧಿಸಲು 274 ರನ್ ಬಾರಿಸಬೇಕಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ಪರ ನಾಯಕ ಆಯರೋನ್ ಫಿಂಚ್ ಮತ್ತು ಸ್ಟೀವೆನ್ ಸ್ಮಿತ್ ಭರ್ಜರಿ ಶತಕ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಆ ಮೂಲಕ ಫಿಂಚ್ ಪಡೆ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿತು.
ಮೊದಲು ಕ್ರೀಸ್ ಗೆ ಆಗಮಿಸಿದ ನಾಯಕ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 156 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 69 ರನ್ ಗಳಿಸಿದ್ದ ವಾರ್ನರ್ ಶಮಿ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಸ್ಮಿತ್ ಜೊತೆ ಗೂಡಿದ ಫಿಂಚ್ ತಮ್ಮ ರನ್ ಬೇಟೆ ಮುಂದುವರೆಸಿದರು. ಕೇವಲ 124 ಎಸೆತಗಳಲ್ಲಿ ಫಿಂಚ್ 114 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಸ್ಯಾಯಿನಿಸ್ ಜೊತೆ ಗೂಡಿದ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 66 ಎಸೆತಗಳಲ್ಲಿ 105 ರನ್ ಗಳಿಸಿದ ಸ್ಮಿತ್ ಆಸಿಸ್ ಪರ 4ನೇ ವೇಗದ ಶತಕ ಸಿಡಿಸಿದರು. ಬಳಿಕ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.
ಸ್ಟಾಯಿನಿಸ್ ತಾವೆದುರಿಸಿದ ಮೊದಲ ಎಸೆತದಲ್ಲಿ ಔಟ್ ಆದರೆ, ಮ್ಯಾಕ್ಸ್ ವೆಲ್ 45 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ತಮ್ಮ ಕಾಣಿಕೆ ನೀಡಿದರು. ಅಂತಿಮವಾಗಿ ಆಸಿಸ್ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿ, ಭಾರತಕ್ಕೆ ಗೆಲ್ಲಲು 375 ರನ್ ಗಳ ಬೃಹತ್ ಗುರಿ ನೀಡಿತು. ಭಾರತದ ಪರ ಶಮಿ ಮೂರು ವಿಕೆಟ್ ಪಡೆದರೆ, ಬುಮ್ರಾ, ಸೈನಿ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು.
Key words: india –austrelia-onday-macth- 375 run- target-Team India.