ಬೆಂಗಳೂರು, ಆಗಸ್ಟ್ 4,2022(www.justkannada.in): ಕೋವಿಡ್ ಉಪಟಳದ ನಿರ್ವಹಣೆಯಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಲ್ಲಿ ಇಂದು ಪ್ರಕಟಿಸಿದರು.
ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ದಿ ಸಮ್ಮೇಳನದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-19 ರ ಸೋಂಕು ವ್ಯಾಪಿಸುತ್ತಿದ್ದಂತೆಯೇ ಸಣ್ಣ ಸಣ್ಣ ದೇಶಗಳು ಮಾತ್ರವಲ್ಲ, ಬೃಹತ್ ರಾಷ್ಟ್ರಗಳಲ್ಲೂ ಕೂಡಾ ಆರ್ಥಿಕತೆ ಕುಸಿದಿದ್ದು ಮಾತ್ರವಲ್ಲದೇ, ಕೋವಿಡ್ ಉಪಟಳದ ನಿಯಂತ್ರಣದಲ್ಲಿ ವಿಫಲತೆ ಕಂಡಿದ್ದು ಸತ್ಯ. ಆದರೆ, 130 ಕೋಟಿಗೂ ಹೆಚ್ಚು ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ 100 ಕೋಟಿಗೂ ಹೆಚ್ಚು ಜನ ಸಂಖ್ಯೆಗೆ ತಲಾ ಎರಡು ಡೋಸ್ ನಂತೆ 200 ಕೋಟಿ ಲಸಿಕೆ ಹಾಕಿರುವುದು ಒಂದು ದಾಖಲೆ ಎಂದು ತಿಳಿಸಿದರು.
ಕೋವಿಡ್ ಒಂದೆಡೆ ಔಷಧಿಗಳು ಇಲ್ಲ. ಮತ್ತೊಂದೆಡೆ ಚಿಕಿತ್ಸೆ ಇಲ್ಲ. ಮಗದೊಂದೆಡೆ ಲಸಿಕೆ ಇಲ್ಲ. ಇನ್ನೊಂದೆಡೆ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ. ಇಂತಹ ಸಂದರ್ಭದಲ್ಲಿ ಸ್ವದೇಶಿ ಲಸಿಕೆ ತಯಾರಿಕೆಗೆ ಪ್ರೋತ್ಸಾಹ ನೀಡಿ, ದೇಶದ ಎಲ್ಲರಿಗೆ ಉಚಿತ ಲಸಿಕೆ ನೀಡಿ, ಕೋವಿನ್ ಆಪ್ ಮೂಲಕ ಲಸಿಕೆ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಕೋವಿಡ್ ನಿಂದ ಮೊದಲು ಸುಧಾರಿಸಿಕೊಂಡ ಮೊದಲ ರಾಷ್ಟ್ರ ಭಾರತ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.
ಕೋವಿಡ್ ಸಂದರ್ಭದಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಿಗೆ ಸತತ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರ ಉಚಿತವಾಗಿ ಆಹಾರ ಧಾನ್ಯಗಳನ್ನು ಪೂರೈಸಿ, 80 ಕೋಟಿ ಜನ ಸಂಖ್ಯೆಯ ಹಸಿವು ನೀಗಿಸಿ ಅವರ ಜೀವ ಮತ್ತು ಜೀವನಕ್ಕೆ ಭದ್ರತೆಯನ್ನು ಒದಗಿಸಿ, ಇಡೀ ಜಗತ್ತಿಗೆ ಭಾರತೀಯ ಆರ್ಥಿಕತೆಯ ಮಾನವೀಯ ಮುಖವನ್ನು ಪ್ರದರ್ಶಿಸಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಪ್ರಧಾನ ಮಂತ್ರಿಯನ್ನು ಪ್ರಧಾನ ಮಂತ್ರಿ ಎಂದು ಯಾರೂ ಪರಿಗಣಿಸುತ್ತಿರಲಿಲ್ಲ. ಅಷ್ಟು ಮಾತ್ರವಲ್ಲ. ಕೇಂದ್ರ ಸರ್ಕಾರದಲ್ಲಿದ್ದ ಪ್ರತಿ ಮಂತ್ರಿಯೂ ಕೂಡಾ ತಾನು ಪ್ರಧಾನ ಮಂತ್ರಿ ಎಂದು ಭಾವಿಸುತ್ತಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರಂಗಗಳನ್ನು ಪುನಶ್ಚೇತನಗೊಳಿಸಿದೆ. ಹೊಸ ದಿಕ್ಕನ್ನು ತೋರಿದೆ ಎಂದು ನುಡಿದರು.
ಸರ್ವವ್ಯಾಪಿ ಸರ್ವಸ್ಪರ್ಶಿ !
ಗ್ರಾಮೀಣ ಭಾರತದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಿ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಿ, ಉರುವಲು ಸೌದೆಯನ್ನು ಬಳಸಿ ಅಡುಗೆ ಮಾಡುತ್ತಿದ್ದ ಮಹಿಳೆಯರ ಆರೋಗ್ಯ ಕಾಪಾಡಲು ಅಡುಗೆ ಅನಿಲದ ಸಿಲಿಂಡರ್ ಗಳನ್ನು ಉಚಿತವಾಗಿ ಒದಗಿಸಿ ಹಾಗೂ ಬೆಳಕು ಇಲ್ಲದೇ ಕತ್ತಲಲ್ಲೇ ಜೀವಿಸುತ್ತಿದ್ದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಎಲ್ಲೆಡೆ ಸಂಪತ್ತು ಸೃಜಿಸಿ, ಕೇಂದ್ರ ಸರ್ಕಾರ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಸರ್ಕಾರ ಎನಿಸಿದೆ ಎಂದು ಅಮಿತ್ ಶಾ ಅವರು ಬಣ್ಣಿಸಿದರು.
ಸ್ವಸ್ಥ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸ್ವಚ್ಛ ಭಾರತ ಯೋಜನೆಯನ್ನು ಏಕಕಾಲಕ್ಕೆ ದೇಶವಿಡೀ ಅನುಷ್ಠಾನಕ್ಕೆ ತಂದದ್ದು ಮಾತ್ರವಲ್ಲ, ಇಡೀ ಪರಿಸರವನ್ನು ಸುಧಾರಿಸಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ್ದಾಗಿದೆ ಎಂದರು.
ಬ್ಯಾಕ್ ಅಪ್ ಫಾರ್ ಸ್ಟಾರ್ಟ್ ಅಪ್ !
ಕೇಂದ್ರ ಸರ್ಕಾರವು ನವೋದ್ಯಮಗಳಿಗೆ ಬೆನ್ನೆಲುಬಾಗಿ ಹಾಗೂ ಬೆಂಬಲವಾಗಿ ನಿಲ್ಲುವ ಹಲವು ಯೋಜನೆಗಳನ್ನು ರೂಪಿಸಲಿದೆ. ಹೊಸ ಅವಿಷ್ಕಾರಗಳಿಗೆ ಪೇಟೆಂಟ್ ಗಳನ್ನು ಪಡೆಯಲು, ಭೌದ್ದಿಕ ಹಕ್ಕು (ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್) ಕಾಯ್ದು ಕೊಳ್ಳುವ ವಿಧಾನಗಳನ್ನು ಸರಳೀಕರಿಸಲು ಕ್ರಮ ವಹಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ, ಆಮದು ಮತ್ತು ರಫ್ತು ಕ್ಷೇತ್ರಗಳಲ್ಲಿ ಸುಧಾರಣೆ ಹಾಗೂ ಸುಲಭ ವ್ಯವಹಾರಿಕ ಚಟುವಟಿಕೆ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್), ಎಲ್ಲದರ ಫಲವಾಗಿ ಭಾರತವು ವಿಶ್ವದಲ್ಲಿಯೇ ಅತೀ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.
ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಒತ್ತು ನೀಡಿ ಎಂದು ಭಾರತೀಯ ಕೈಗಾರಿಕಾ ಒಕ್ಕೂಟಕ್ಕೆ ಸಲಹೆ ನೀಡಿದ ಅಮಿತ್ ಶಾ ಅವರು ಕೈಗಾರಿಕಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಕ್ಕೂಟವು ವೇದಿಕೆಯಾಗಲಿ ಎಂದು ಆಶಿಸಿದರು.
ವ್ಯವಹಾರ ಮಾಡುವುದು ಸರ್ಕಾರದ ವ್ಯವಹಾರವಲ್ಲ !
ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಮಾತನಾಡಿ ಶಿಕ್ಷಣದ ಪ್ರಮಾಣ ಕಡಿಮೆ ಇರುವ ಭಾರತದಲ್ಲಿ ಡಿಜಿಟಲ್ ವ್ಯವಹಾರ ಸಾಧ್ಯವೇ ? ಎಂದು ಅಣಕವಾಡುತ್ತಿದ್ದವರಿಗೆ ವಿಶ್ವದಲ್ಲಿಯೇ ಅತೀ ಹೆಚ್ಚು ಡಿಜಿಟಲ್ ವ್ಯವಹಾರ ಭಾರತದಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಹೇಳುವ ಸಮಯದ ಇದೀಗ ಕೂಡಿ ಬಂದಿದೆ. ಭಾರತದಲ್ಲಿ ರಸ್ತೆ, ರೈಲು, ವಿಮಾನ ಹಾಗೂ ವೈ-ಫೈ ಸಂಪರ್ಕ ಎಲ್ಲೆಡೆ ವ್ಯಾಪಿಸುತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಭಾರತದಲ್ಲಿ 64 ವಿಮಾನ ನಿಲ್ದಾಣಗಳು ಇತ್ತು. ಇದೀಗ ಕಳೆದ ಎಂಟು ವರ್ಷಗಳಲ್ಲಿ 54 ವಿಮಾನ ನಿಲ್ದಾಣಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಇದರಿಂದ 21 ಹಸಿರು ಕ್ಷೇತ್ರ ವಿಮಾನ ನಿಲ್ದಾಣಗಳೂ ಒಳಗೊಂಡಂತೆ ದೇಶದಲ್ಲಿ 118 ವಿಮಾನ ನಿಲ್ದಾಣಗಳು ಇವೆ.
ಮುಂಬರುವ ವರ್ಷಗಳಲ್ಲಿ 100 ವಿಮಾನ ನಿಲ್ದಾಣಗಳು ಹಾಗೂ 100 ಹೆಲಿಪೋರ್ಟ್ ಗಳನ್ನು ನಿರ್ಮಿಸುವ ಯೋಜನೆ ಇದೆ. ಸದಾ ಸಂಘರ್ಷದ ವಾತಾವರಣದಲ್ಲೇ ಜೀವನ ಸಾಗಿಸಬೇಕಿದ್ದ ಈಶಾನ್ಯ ರಾಜ್ಯಗಳಲ್ಲಿಯೂ ಶಾಂತಿ ಸ್ಥಾಪನೆಯಾಗಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮಾತ್ರ ಸರ್ಕಾರದ ಕೆಲಸ. ಆದರೆ, ವ್ಯವಹಾರ ಮಾಡುವುದು ಸರ್ಕಾರದ ವ್ಯವಹಾರವಲ್ಲ (ಗೌರ್ನಮೆಂಟ್ ಹ್ಯಾಸ್ ನೋ ಬ್ಯುಸಿನೆಸ್ ಟು ಡು ಬ್ಯುಸಿನೆಸ್) ಎಂಬ ಮೋದಿ ಸರ್ಕಾರದ ಮಾತುಗಳನ್ನು ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರಗಳು ಸಹೃದಯತೆಯಿಂದ ಸ್ವೀಕರಿಸಿವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾರತದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಹೊರತರಲು ತಮ್ಮ ಸಚಿವ ಸಂಪುಟದಲ್ಲಿಯೇ ಅನುಮೋದನೆ ದೊರೆತಿದೆ. ಅಲ್ಲದೇ, ಶೀಘ್ರದಲ್ಲಿಯೇ ರಾಜ್ಯದಲ್ಲಿ ಹೊಸ ಔದ್ಯೋಗಿಕ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಅಲ್ಲದೇ, ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರ್ಣಗೊಳ್ಳುವ 2047 ರ ವೇಳೆಗೆ ಬಲಿಷ್ಠ ಭಾರತವನ್ನು ಕಾಣುವ ಸೌಭಾಗ್ಯ ನಮ್ಮೆಲ್ಲರದ್ದಾಗಲಿ ಎಂದು ಆಶಿಸಿದರು.
ಕರ್ನಾಟಕದ ವಿಶೇಷವೆಂದರೆ ಹತ್ತು ಕೃಷಿ ವಾತಾವರಣ ವಲಯ, ಸೂರ್ಯಕಿರಣಗಳು ಪ್ರಜ್ವಲಿಸುವ 300 ದಿನಗಳು ಎಂದು ತಿಳಿಸಿದ ಬೊಮ್ಮಾಯಿ ಅವರು ಕೃಷಿ ಕ್ಷೇತ್ರದಲ್ಲಿ ಶೇಕಡಾ ಒಂದರಷ್ಟು ಅಭಿವೃದ್ಧಿಯಾದರೆ, ಉತ್ಪಾದನಾ ಕ್ಷೇತ್ರದಲ್ಲಿ ಶೇಕಡಾ ನಾಲ್ಕರಷ್ಟು ಬೆಳವಣಿಯಾಗುತ್ತದೆ. ಅಂತೆಯೇ, ಸೇವಾ ಕ್ಷೇತ್ರದಲ್ಲಿ ಶೇಕಡಾ ಹತ್ತರಷ್ಟು ಪ್ರಗತಿಯಾಗುತ್ತದೆ ಎಂದು ತಿಳಿಸಿ, ಆರ್ಥಿಕತೆ ಎಂಬುದು ಹಣವಲ್ಲ ಜನ ಎಂದು ಹೇಳಿದರು.
ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಹೊಸ್ತಿಲಲ್ಲಿ ಇರುವ ಈ ಸುಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷದಲ್ಲಿ ಹೇಗಿರಬೇಕು ? ಹೇಗೆ ಮುನ್ನಡೆಯಬೇಕು ? ಎಂಬ ಬಗ್ಗೆ ಸರ್ಕಾರ ಮತ್ತು ಕೈಗಾರಿಕೆಯೊಂದಿಗೆ ರಚನಾತ್ಮಕ ಸಂಭಾಷಣೆ ಸರಣಿಯಲ್ಲಿ ಜೆಟ್ ಲೈನ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ರಾಜನ್ ನವನಿ, ಐ ಟಿ ಸಿ ಲಿಮಿಟೆಡ್ ನ ಅಧ್ಯಕ್ಷ ಸಂಜೀವ್ ಪುರಿ, ಟಿ ವಿ ಎಸ್ ಸಪ್ಲೈ ಚೈನ್ ಸಲ್ಯೂಷನ್ಸ್ ಲಿಮಿಟೆಡ್ ನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆರ್. ದಿನೇಶ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ನ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್, ಆರ್ ಪಿ ಸಂಜೀವ್ ಗೊಯಂಕಾ ಸಮೂಹದ ಅಧ್ಯಕ್ಷ ಡಾ ಸಂಜೀವ್ ಗೊಯಂಕ ಹಾಗೂ ಬಜಾಜ್ ಫಿನ್ ಸರ್ವ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಅವರು ತಮ್ಮ ಅತ್ಯಮೂಲ್ಯ ಚಿಂತನೆಗಳನ್ನು ಹೊರಹಾಕಿದರು.
ಈ ಮುನ್ನ ತಮ್ಮ ಸ್ವಾಗತ ಭಾಷಣದಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅವರು ತಮ್ಮ ಒಕ್ಕೂಟದಲ್ಲಿ ಮೂರು ಲಕ್ಷ ಕ್ಕೂ ಹೆಚ್ಚು ಸದಸ್ಯ ಸಂಸ್ಥೆಗಳಿವೆ. ಈ ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಬಲಿಷ್ಠ ಹಾಗೂ ನವ ಭಾರತಕ್ಕೆ ಬುನಾದಿ ಹಾಕುತ್ತೇವೆ ಎಂದರು. ಅಲ್ಲದೆ, ಮುಂದಿನ 25 ವರ್ಷ ಅವಧಿಯನ್ನು ಅಮೃತ ಕಾಲ ಎಂದು ಬಣ್ಣಿಸಬಹುದಾಗಿದೆ.
ಭಾರತವನ್ನು 75 ನೇ ವರ್ಷದಿಂದ 100 ನೇ ವರ್ಷಕ್ಕೆ ಪಯಣಿಸುವ ಪ್ರಗತಿ ಪಥದ ನಕ್ಷೆಗೆ ಮುನ್ನುಡಿ ಬರೆಯಲು ಈ ಸಮ್ಮೇಳನವು ದಾರಿದೀಪವಾಗಲಿದೆ ಎಂದು ಭರವಸೆ ನೀಡಿದರು.
Key words: India -emerged – world leader- Union Home Minister -Amit Shah