ಬೆಂಗಳೂರು, ಜೂನ್ 14, 2022 (www.justkannada.in): ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಇಂದು ಇಲ್ಲಿನ ‘ಲಾರ್ಡ್ಸ್’ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ 2ನೇ ಪಂದ್ಯ ನಡೆಯಲಿದೆ.
ಬೌಲರ್ಗಳ ಪ್ರಚಂಡ ಪ್ರದರ್ಶನ ಹಾಗೂ ಆರಂಭಿಕ ಆಟಗಾರರ ಯೋಜನಾಬದ್ಧ ಬ್ಯಾಟಿಂಗ್ ನೆರವಿನಿಂದ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದ ಚಿಲುಮೆಯಂತಾಗಿರುವ ಟೀಮ್ ಇಂಡಿಯಾ ಈಗ ದ್ವಿತೀಯ ಪಂದ್ಯದಲ್ಲೂ ಅಂಥದ್ದೇ ಪ್ರದರ್ಶನ ಸಂಘಟಿಸಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.
ತೊಡೆಸಂದು ಗಾಯದಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಲಭ್ಯವಾಗುವರೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಮೂಲಗಳ ಪ್ರಕಾರ, ತೊಡೆಸಂದು ನೋವಿನಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ. ಮೊದಲ ಪಂದ್ಯದಲ್ಲಿ ಕೊಹ್ಲಿ ಅಲಭ್ಯತೆ ತಂಡದ ಮೇಲೆ ವ್ಯತಿರಿಕ್ತ ಪರಿಣಾಮವನ್ನೇನೂ ಬೀರಿಲ್ಲ.
ಕೊಹ್ಲಿ ಫಿಟ್ ಆದರೆ ಶ್ರೇಯಸ್ಗೆ ಕೊಕ್? ಒಂದು ವೇಳೆ ಕೊಹ್ಲಿ ಫಿಟ್ ಆದರೆ ೨ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಜಾಗದಲ್ಲಿ ಆಡುವ ಸಂಭವವಿದೆ. ಏಕದಿನ ಸರಣಿ ಆರಂಭಗೊಳ್ಳುವುದಕ್ಕೂ ಮೊದಲು ನಡೆದ ಟಿ೨೦ ಸರಣಿಯ 3ನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.