ಕೊಚ್ಚಿನ್, ಸೆಪ್ಟೆಂಬರ್, 2, 2022 (www.justkannada.in): ಶುಕ್ರವಾರ ಬೆಳಿಗ್ಗೆ, ಅಂದರೆ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಕೊಚ್ಚಿನ್ ನಲ್ಲಿ ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟಿರುವ ೪೫,೦೦೦ ಟನ್ ತೂಕದ ನೂತನ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಗೆ ಚಾಲನೆ ನೀಡಿದರು. ಈ ಬೃಹತ್ ಹಡಗನ್ನು ತಯಾರಿಸಲು ಬರೋಬ್ಬರಿ 13 ವರ್ಷಗಳ ಸಮಯ ಹಿಡಿದಿದ್ದು, ಇಂದು ಐತಿಹಾಸಿಕ ದಿನವಾಗಿದೆ.
ಈ ಹಡಗು ೨೬೨ ಮೀ. (೮೬೦ ಅಡಿ) ಉದ್ದವಿದ್ದು, ೬೦ ಮೀ (೧೯೭ ಅಡಿ) ಎತ್ತರವಿದೆ. ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟ ಮೊಟ್ಟ ಮೊದಲ ವಿಮಾನವಾಹಕ ನೌಕೆಯಾಗಿದೆ. ಈ ಹಡಗು ಒಂದೇ ಬಾರಿ ಒಟ್ಟು ೩೦ ಫೈಟರ್ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಧಾನಿ ಮೋದಿ ಅವರು ಈ ಹಡಗನ್ನು “ತೇಲುವ ನಗರ” ಹಾಗೂ “ಸ್ಥಳೀಯ ಸಾಮರ್ಥ್ಯದ ಚಿಹ್ನೆ” ಎಂದು ಬಣ್ಣಿಸಿದ್ದಾರೆ. “ಐಎನ್‌ಎಸ್ ವಿಕ್ರಾಂತ್ ಸೇರ್ಪಡೆಯೊಂದಿಗೆ ಭಾರತ ಸ್ಥಳೀಯ ತಂತ್ರಜ್ಞಾನದೊಂದಿಗೆ ಬೃಹತ್ ವಿಮಾನವಾಹಕ ನೌಕೆಗಳನ್ನು ತಯಾರಿಸುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದು ದೇಶಕ್ಕೆ ಹೊಸ ಆತ್ಮವಿಶ್ವಾಸವನ್ನು ತುಂಬಿದೆ,” ಎಂದು ಅಭಿಪ್ರಾಯಪ್ಟಟರು.
ಭಾರತದ ಮತ್ತೊಂದು ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಒಟ್ಟಿಗೆ ೩೦ ವಿಮಾನಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಯುಕೆನ ರಾಯಲ್ ನೇವಿಯ ಹೆಚ್ ಎಂಎಸ್ ಕ್ವೀನ್ ಎಲಿಜೆಬತ್ ೪೦ ವಿಮಾನಗಳು ಹಾಗೂ ಯುಎಸ್ ನೇವಿಯ ನಿಮಿಟ್ಝ್ ಕ್ಲಾಸ್ ಕ್ಯಾರಿರ್ಸ್ ೬೦ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ನಮ್ಮ ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ನಿರ್ಮಿಸಲು ೨೦೦ ಬಿಲಿಯನ್ ರೂಪಾಯಿಗಳು (೨.೫ ಬಿಲಿಯನ್ ಡಾಲರ್ ಗಳು; ೨.೧ ಬಿಲಿಯನ್ ಪೌಂಡ್‌ಗಳು) ವೆಚ್ಚವಾಗಿದ್ದು, ೨೦೧೭ರಲ್ಲಿಯೇ ನೌಕಾಪಡೆಗೆ ಸೇರ್ಪಡೆಯಾಗಬೇಕಾಗಿತ್ತು. ಆದರೆ ಈ ನೌಕೆಯ ನಿರ್ಮಾಣದ ಎರಡನೇ ಹಂತದಲ್ಲಿ ವಿಳಂಬವಾಯಿತು.
ಆದರೆ ಈ ಹಡಗಿಗೆ ಇಂದು ಚಾಲನೆ ದೊರೆತಿರುವುದು ಭಾರತದ ಪಾಲಿಗೆ ಇತಿಹಾಸವನ್ನೇ ಸೃಷ್ಟಿಸಿದೆ. ಈ ಮೂಲಕ ಭಾರತ ಇಂತಹ ಬೃಹತ್ ನೌಕೆಗಳನ್ನು ತಯಾರಿಸುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಸೇರ್ಪಡೆಗೊಂಡಿದೆ. ಜೊತೆಗೆ ಇದು, ಪ್ರಧಾನಿ ಮೋದಿಯವರ ಸ್ಥಳೀಯ ರಕ್ಷಣಾ ತಯಾರಿಕೆಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಉತ್ತೇಜನವೂ ಲಭಿಸಿದಂತಾಗಿದೆ.
ಈ ಹಡಗಿನ ಹೆಸರು ‘ವಿಕ್ರಾಂತ್’ (ಅಂದರೆ ಧೈರ್ಯ) ಸಹ ಒಂದು ವಿಶೇಷವೇ – ಇದು ೧೯೬೧ರಲ್ಲಿ ಯುಕೆಯಿಂದ ಖರೀದಿಸಿ, ಚಾಲನೆ ನೀಡಲಾಗಿದ್ದಂತಹ ಭಾರತದ ಮೊಟ್ಟ ಮೊದಲ ವಿಮಾನವಾಹಕ ನೌಕೆಯ ಹೆಸರಾಗಿತ್ತು. ಮೊದಲ ಐಎನ್‌ಎಸ್ ವಿಕ್ರಾಂತ್ ರಾಷ್ಟ್ರದ ಹೆಮ್ಮೆಯ ಪ್ರಮುಖ ಸೂಚಕವಾಗಿತ್ತು ಮತ್ತು ಹಲವು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಇದರಲ್ಲಿ ೧೯೭೧ರ ಯುದ್ಧವೂ ಸೇರಿದೆ. ಇದನ್ನು ೧೯೯೭ರಲ್ಲಿ ಕಳಚಲಾಯಿತು.
ಶುಕ್ರವಾರ ಈ ನೂತನ ನೌಕೆಗೆ ಚಾಲನೆ ನೀಡಿದ ನಂತರ ಹೊಸ ವಿಕ್ರಾಂತ್ ಭಾರತ ಹಾಗೂ ಅಂತಾರಾಷ್ಟ್ರೀಯ ಎರಡೂ ಸಮುದ್ರಗಳಲ್ಲಿ ಯಾನ ಮಾಡಲಿದೆ. ಇದಕ್ಕೆ ಸರಣಿ ಯುದ್ಧನೌಕೆಗಳು ಹಾಗೂ ಸಬ್ ಮೆರಿನ್‌ಗಳು ಜೊತೆಯಾಗಲಿವೆ.
ಹಡಗಿನ ಒಳಗಿನ ವೈಶಿಷ್ಟ್ಯತೆಗಳು.
ಪ್ರಸ್ತುತ, ವಿಕ್ರಾಂತ್ ಕೇರಳದ ಸರ್ಕಾರಿ ಸ್ವಾಮ್ಯದ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿದೆ. ಈ ಹಡಗನ್ನು ಇಲ್ಲಿಯೇ ನಿರ್ಮಿಸಲಾಯಿತು. ಇಂದು ಇಲ್ಲಿಂದಲೇ ಇದರ ಉದ್ಘಾಟನೆ ಮಾಡಲಾಯಿತು. ಇದರ ಸೇವೆಗಳು ಆರಂಭವಾದ ನಂತರ ಕೊಚ್ಚಿನ್ ಅದರ ಕಾರ್ಯನಿರ್ವಹಣಾ ಸ್ಥಳವಾಗಲಿದ್ದು, ೧,೭೦೦ ಸಿಬ್ಬಂದಿಗಳಿಗೆ ಮನೆಯಾಗಲಿದೆ.
ನೌಕೆಯನ್ನು ಮಾಧ್ಯಮಕ್ಕೆ ಪರಿಚಯಿಸಿದ ಲೆಫ್ಟಿನೆಂಟ್ ಕಮಾಂಡರ್ ಸಾಯಿ ಕೃಷ್ಣನ್ ಅವರು ಹಡಗಿನ ಹೃದಯಭಾಗವನ್ನು ತೋರಿಸಿದರು. “ಇಲ್ಲಿಂದಲೇ ಗ್ಯಾಸ್ ಟರ್ಬೈನ್ ಇಂಜಿನ್ ಗಳು ಕಾರ್ಯನಿರ್ವಹಿಸುತ್ತವೆ. ಇದರಿಂದಲೇ ಈ ಬೃಹತ್ ಹಡಗು ಚಲಿಸುತ್ತದೆ. ಈ ನೌಕೆಯ ನಾಲ್ಕು ಇಂಜಿನ್‌ಗಳು ೮೮ ಮೆವ್ಯಾ ಶಕ್ತಿಯಿಂದ ಚಾಲಿತಗೊಳ್ಳುತ್ತದೆ. ಅಂದರೆ ಇದರರ್ಥ ಇಷ್ಟು ಪ್ರಮಾಣದ ವಿದ್ಯುತ್ ಒಂದು ಇಡೀ ನಗರಕ್ಕೆ ಸರಬರಾಜು ಮಾಡುವಷ್ಟಾಗುತ್ತದಂತೆ.
ಈ ಹಡಗಿನಲ್ಲಿ ಮೂರು ಅಡುಗೆ ತಯಾರಿಸುವ ಕೋಣೆಗಳಿವೆ. ಇಲ್ಲಿ ಕಾಫಿ ತಯಾರಿಸುವ ಯಂತ್ರಗಳು, ಮೇಜುಗಳು ಹಾಗೂ ಖುರ್ಚಿಗಳಿದ್ದು, ದೊಡ್ಡ ದೊಡ್ಡ ಪಾತ್ರೆಗಳನ್ನು ಇಡಲು ಸ್ಥಳಾವಕಾಶವಿದೆ. “ಈ ಮೂರು ಅಡುಗೆ ಮನೆಗಳನ್ನು ಒಟ್ಟುಗೂಡಿಸಿದರೆ ಒಂದೇ ಬಾರಿಗೆ ೬೦೦ ಮಂದಿ ಊಟ ಮಾಡಬಹುದಂತೆ.”
ಈ ಹಡಗಿನಲ್ಲಿ ೧೬-ಹಾಸಿಗೆಗಳುಳ್ಳ ಆಸ್ಪತ್ರೆಯಿದೆ. ಜೊತೆಗೆ ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಒಂದು ತುರ್ತುನಿಗಾ ಘಟಕವಿದೆ. ವಿಮಾನಗಳನ್ನು ನಿಲ್ಲಿಸುವ ಜಾಗದಲ್ಲಿ ರಷ್ಯಾ ಮೂಲದ ಎರಡು ವಿಮಾನಗಳು ಮಿಗ್-೨೯ ಕೆ ಫೈಟರ್ ಹಾಗೂ ಕ್ಯಾಮೊವ್-೩೧ ಮುನ್ನೆಚ್ಚರಿಕೆ ನೀಡುವ ಹೆಲಿಕಾಪ್ಟರ್‌ಗಳನ್ನು ತುದಿಯಲ್ಲಿ ನಿಲ್ಲಿಸಲಾಗಿರುತ್ತದೆ.
“ಈ ಸ್ಥಳವನ್ನು ನೀವು ಒಂದು ವಾಹನಗಳನ್ನು ನಿಲುಗಡೆ ಮಾಡುವ ಪಾರ್ಕಿಂಗ್ ಸ್ಥಳವೆಂದು ಊಹಿಸಿಕೊಳ್ಳಬಹುದು. ಜೊತೆಗೆ ಈ ವಿಮಾನಗಳನ್ನು ನೋಡಿಕೊಳ್ಳಲು, ದುರಸ್ತಿಗೊಳಿಸಲು ಒಂದು ತಂಡವೇ ಕಾರ್ಯನಿರತವಾಗಿರುತ್ತದೆ. ಇಲ್ಲಿಂದ ವಿಶೇಷ ಲಿಫ್ಟ್ ಗಳಲ್ಲಿ ವಿಮಾನವನ್ನು ಮೇಲಕ್ಕೆ ಅಂದರೆ ಫ್ಲೈಟ್ ಡೆಕ್‌ಗೆ ಹಾರಾಟ ನಡೆಸಲು ಎತ್ತಲಾಗುತ್ತದೆ,” ಎಂದು ಲೆಫ್ಟಿನೆಂಟ್ ಕಮಾಂಡರ್ ವಿಜಯ್ ಶಿಯೊರನ್ ಅವರು ವಿವರಿಸಿದರು.
ಭಾರತೀಯ ನೌಕಾಪಡೆ ಇದೇ ವರ್ಷ ಮುಂದಿನ ತಿಂಗಳುಗಳಲ್ಲಿ ಈ ನೌಕೆಯಿಂದ ತೀವ್ರ ವಿಮಾನ ಹಾರಾಟ ಕಾರ್ಯಾಚರಣೆಗಳ ಪರೀಕ್ಷೆಯನ್ನು ನಡೆಸಲಿದೆ. “ನಮ್ಮ ವಿಮಾನಗಳ ಡೆಕ್ ಗಾತ್ರ ಸುಮಾರು ೧೨,೫೦೦ ಚದರಡಿಗಳಷ್ಟಿದೆ – ಅಂದರೆ ಎರಡೂವರೆ ಹಾಕಿ ಫೀಲ್ಡ್ಗಳಷ್ಟು ದೊಡ್ಡದು ಹಾಗೂ ಇಲ್ಲಿಂದ ಒಂದೇ ಬಾರಿಗೆ ನಾವು ೧೨ ಫೈಟರ್ ವಿಮಾನಗಳು ಹಾಗೂ ಆರು ಹೆಲಿಕಾಪ್ಟರ್‌ಗಳನ್ನು ಹಾರಾಟ ಮಾಡಬಹುದು,” ಎಂದು ಫ್ಲೈಟ್ ಡೆಕ್ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಸಿದ್ಧಾರ್ಥ್ ಸೋನಿ ಅವರು ಮಾಹಿತಿ ನೀಡಿದರು.
ಸುದ್ದಿ ಮೂಲ: ಬಿಬಿಸಿ ನ್ಯೂಸ್
Key words: India- new -aircraft – INS Vikrant- launched