ದುಬೈ:ಜೂ-16:(www.justkannada.in) ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ಪ್ರಸಿದ್ಧ ಬೀಚ್ ಜುಮೇರಾದಲ್ಲಿ ಈಜುವಾಗ ಹೃದಾಯಾಘಾತದಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಜಾನ್ ಪ್ರೀತಂ ಪೌಲ್ ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಜಾನ್ ಪ್ರೀತಂ ತನ್ನ ಮೂವರು ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಬೀಚ್ ನಲ್ಲಿ ತನ್ನ ದೇಹದಲ್ಲಿ ಅಂಟಿಕೊಂಡಿದ್ದ ಮರಳನ್ನು ಶುಚಿಗೊಳಿಸುವ ಸಲುವಾಗಿ ಜಾನ್ ಪ್ರೀತಂ, ನೀರಿಗೆ ಇಳಿದು ಈಜುತ್ತಿದ್ದಾಗ ಘಟನೆ ಸಂಭವಿಸಿದೆ.
ಈ ಬಗ್ಗೆ ಮೃತ ಜಾನ್ ಪ್ರೀತಂ ಪೌಲ್ ಪತ್ನಿ ಎವಿಲೈನ್, ಜಾನ್ ಪ್ರೀತಂ ಮತ್ತೆ ಬೀಚ್ಗೆ ಇಳಿಯುವ ಮುನ್ನ ನಾವು ಬೀಚ್ ನಿಂದ ಸ್ವಲ್ಪ ದೂರ ಬಂದಿದ್ದೆವು. ಕೆಲವೇ ಕ್ಷಣಗಳಲ್ಲಿ ಅವರ ಮೃತದೇಹ ಬೀಚ್ನಲ್ಲಿ ತೇಲುತ್ತಿರುವುದನ್ನು ಕಂಡು ಆಘಾತವಾಗಿದೆ. ಈ ಘಟನೆ ಹೇಗೆ ನಡೆಯಿತು ಎಂಬುದು ಈಗಲೂ ತಿಳಿಯುತ್ತಿಲ್ಲ. ಅವರೊಬ್ಬ ಒಳ್ಳೆಯ ಈಜುಪಟುವಾಗಿದ್ದರು. ಆದರೆ, ನೀರಿನಲ್ಲಿ ಮುಳುಗಿದ್ದಾಗ ಅವರು ಹೃದಯಾಘಾತದಿಂದ ಬಳಲಿದ್ದರು ಎಂದು ಪೊಲೀಸರು ತಿಳಿಸಿದರು ಎಂದು ಹೇಳಿದ್ದಾರೆ.
ಜಾನ್ ಪ್ರೀತಂ ಹೃದಯಾಘಾತದಿಂದಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಖಚಿತ ಮಾಹಿತಿ ನೀಡಿದ್ದಾರೆ. ಜಾನ್ ಪ್ರೀತಂ ಯುಎಇ ಮೂಲದ ರೆಡಿಯೋ ಸ್ಟೇಷನ್ನಲ್ಲಿ ಸೇಲ್ಸ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 14 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅಂತಿಮ ಕಾರ್ಯಕ್ಕೆ ಬೆಂಗಳೂರಿಗೆ ಪಾರ್ಥೀವ ಶರೀರ ತರಲಾಗುವುದು ಎಂದು ಜಾನ್ ಪ್ರೀತಂ ಪತ್ನಿ ತಿಳಿಸಿದ್ದಾರೆ.