ಬೆಂಗಳೂರು,ನವೆಂಬರ್,20,2020(www.justkannada.in): ನವೋದ್ಯಮಗಳನ್ನು ಆರಂಭಿಸಲು ಯುರೋಪ್ ನಲ್ಲಿ, ಅದರಲ್ಲಿಯೂ ಮುಖ್ಯವಾಗಿ ನೆದರ್-ಲ್ಯಾಂಡ್ ನಲ್ಲಿ ವಿಫುಲವಾದ ಅವಕಾಶವಿದೆ. ಅಲ್ಲಿನ ಸರ್ಕಾರವೂ ಸ್ಟಾರ್ಟ್-ಅಪ್ ಗಳನ್ನು ಆರಂಭಿಸಲು ಸಾಕಷ್ಟು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ ಎಂದು ನವೋದ್ಯಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಆರಂಭವಾದ ಮೂರು ದಿನಗಳ ಬಿಟಿಎಸ್-2020 ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ನಡೆದ ವರ್ಚುಯಲ್ ಸಂವಾದದಲ್ಲಿ ಪಾಲ್ಗೊಂಡ ನವೋದ್ಯಮಿಗಳು ಹಾಗೂ ಭಾರತ ಮತ್ತು ನೆದರ್-ಲ್ಯಾಂಡ್ ರಾಯಭಾರ ಕಚೇರಿಯ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಭಾರತ ಮತ್ತು ನೆದರಲ್ಯಾಂಡ್ ನಡುವೆ ಉತ್ತಮ ಬಾಂಧವ್ಯವಿದ್ದು ಹೊಸ ಉದ್ಯಮದ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಇರುವ ಉತ್ತಮ ಅವಕಾಶಗಳ ಬಗ್ಗೆ ಎರಡೂ ರಾಷ್ಟ್ರಗಳ ಉದ್ಯಮಿಗಳು, ಅಧಿಕಾರಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಭಾರತದಿಂದ ನೆದರ್ ಲ್ಯಾಂಡ್ ಗೆ ತೆರಳಿ ಅಲ್ಲಿ ನವೋದ್ಯಮಗಳನ್ನು ಆರಂಭಿಸಿ ಯಶಸ್ವಿಯಾದವರು ಕೂಡ ಅಲ್ಲಿರುವ ಪೂರಕ ವಾತಾವರಣದ ಬಗ್ಗೆ ಸಂವಾದದಲ್ಲಿ ವಿವರಿಸಿದರು.
ನೆದರ್ ಲ್ಯಾಂಡ್ ತುಂಬಾ ಭಿನ್ನ ರಾಷ್ಟ್ರವಾಗಿದ್ದು. ಅಲ್ಲಿ ಉದ್ಯಮಗಳನ್ನು ಆರಂಭಿಸಲು ಯಾವುದೇ ಅಡೆ-ತಡೆಗಳಿಲ್ಲ. ಪೂರಕವಾದ ಹಾಗೂ ಉತ್ತೇಜಕವಾದ ವಾತಾವರಣವಿದೆ. ಒಂದು ಉದ್ಯಮವನ್ನು ಸ್ಥಾಪಿಸಲು ಕಾನೂನು, ವೀಸಾ ಮುಂತಾದ ಯಾವ ಸಮಸ್ಯೆಗಳೂ ಅಲ್ಲಿ ಇಲ್ಲ. ಅಲ್ಲಿ ಯಾವ ಪ್ರಭಾವವನ್ನೂ ಬಳಸದೇ ಸುಗಮವಾಗಿ ಉದ್ಯಮ ಸ್ಥಾಪನೆ ಮಾಡಬಹುದು ಎಂಬ ಕಾರಣಕ್ಕೆ ಅಲ್ಲಿಗೆ ತೆರಳಿದ್ದಾಗಿ ನವೋದ್ಯಮಿ ಗೌರವ್ ವರ್ಮಾ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.
ಶಿಕ್ಷಣ, ವ್ಯಕ್ತಿತ್ವ ಬೆಳವಣಿಗೆ, ಔದ್ಯೋಗಿಕ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಮಾರ್ಗದರ್ಶನ ನೀಡುವ ಕೆಲಸದಲ್ಲಿ ತೊಡಗಿಕೊಂಡಿರುವ ಅವರು, ಇಡೀ ಯುರೋಪ್ ನಲ್ಲಿ ಉಳಿದ ಯಾವುದೇ ರಾಷ್ಟ್ರಗಳಿಗೆ ಹೋಲಿಸಿದರೆ ನೆದರ್ ಲ್ಯಾಂಡ್ ಅಂತರರಾಷ್ಟ್ರೀಯ ಮಾರುಕಟ್ಟೆಗೆ ತನ್ನನ್ನು ಹೆಚ್ಚಾಗಿ ತೆರೆದುಕೊಂಡಿದೆ. ಹಾಗಾಗಿ ಸ್ಟಾರ್ಟ್-ಅಪ್ ಗಳ ಬೆಳವಣಿಗೆಗೆ ಉತ್ತಮ ಅವಕಾಶಗಳಿವೆ ಎಂದರು. ಸಿಲಿಕಾನ್ ಸಿಟಿ ಬೆಂಗಳೂರಿನ ಜೊತೆಗೂ ನೆದರ್ ಲ್ಯಾಂಡ್ ಉತ್ತಮ ಸಂಪರ್ಕ ಹೊಂದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಸುಸ್ಥಿರ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನವೋದ್ಯಮದ ಮೂಲಕ ತೊಡಗಿಸಿಕೊಂಡಿರುವ ಸರ್ವೇಶ್ ಅವರು ಮಾತನಾಡಿ, ಉದ್ಯಮದ ಬೆಳವಣಿಗೆಗೆ, ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿಕೊಳ್ಳಲು ನೆದರ್ ಲ್ಯಾಂಡ್ ನಿಜಕ್ಕೂ ಉದ್ಯಮಸ್ನೇಹಿ ರಾಷ್ಟ್ರವಾಗಿದೆ ಎಂದು ಹೇಳಿದರು. ಆ ರಾಷ್ಟ್ರದೊಂದಿಗಿನ ತಮ್ಮ ಪಯಣ ಉಲ್ಲಾಸದಾಯಕವಾಗಿದೆ ಎಂದು ಹೇಳಿಕೊಳ್ಳಲು ಅವರು ಮರೆಯಲಿಲ್ಲ.
ಕೈಗಾರಿಕೆಗಳು, ಸಣ್ಣ ಉದ್ಯಮಗಳಿಗೂ ನೆದರ್ ಲ್ಯಾಂಡ್ ನಲ್ಲಿ ಅತ್ಯುತ್ತಮವಾದ ಮೂಲಸೌಕರ್ಯಗಳಿವೆ. ಉದ್ಯಮಿಗಳು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಕುಟುಂಬದೊಂದಿಗೆ ಇಲ್ಲಿ ಜೀವನ ಆರಂಭಿಸಬಹುದು. ಬ್ಯಾಂಕ್ ಖಾತೆ ತೆರೆಯಲು, ಶಿಕ್ಷಣ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು, ಪರವಾನಗಿ ಹೊಂದಲು ಜನಸ್ನೇಹಿ ಕಾನೂನುಗಳು ಇಲ್ಲಿವೆ. ಶಿಕ್ಷಣ ವ್ಯವಸ್ಥೆಯಂತೂ ಅತ್ಯುತ್ತಮವಾಗಿದೆ ಎಂದು ನೆದರ್ ಲ್ಯಾಂಡ್ ನವರೇ ಆದ ಉದ್ಯಮಿ ಸ್ಟೆಫ್ ವಿವರಿಸಿದರು.
ಭಾರತ ರಾಯಭಾರ ಕಚೇರಿಯ ಡಬ್ಲಿನ್ ಪಾಲ್ ಅವರು ಎರಡೂ ರಾಷ್ಟ್ರಗಳ ನಡುವೆ ಇರುವ ಉತ್ತಮ ಬಾಂಧವ್ಯಗಳ ಬಗ್ಗೆ ವಿವರಿಸಿದರು. ಅಂತರರಾಷ್ಟ್ರೀಯ ಮಾರುಕಟ್ಟೆ ಜಾಲವನ್ನು ವಿಸ್ತರಿಸಿಕೊಳ್ಳಲು ಪೂರಕವಾದ ಮತ್ತು ಚಲನಶೀಲವಾದ ವಾತಾವರಣ ನೆದರ್ ಲ್ಯಾಂಡ್ ನಲ್ಲಿದೆ. ಸ್ಟಾರ್ಟ್-ಅಪ್ ಗಳಿಗೆ ಅಲ್ಲಿನ ಆಡಳಿತ ಸದೃಢವಾದ ನೆಲೆಗಟ್ಟನ್ನು ಒದಗಿಸಿದೆ. ನವೋದ್ಯಮಿಗಳು ವೀಸಾ ಪಡೆಯಲು ಈಗ ಯಾವುದೇ ರೀತಿಯ ತೊಡಕು ಇಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರವೇಶ ಮಾರ್ಗವನ್ನು ಸುಲಲಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ನೆದರ್-ಲ್ಯಾಂಡ್ ನಲ್ಲಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಇರುವುದರಿಂದ ಜಾಗತಿಕ ಮಟ್ಟದಲ್ಲಿ ಪ್ರತಿಭೆಗಳಿಗೆ ಉತ್ತಮ ಅವಕಾಶಗಳಿವೆ. ಅಲ್ಲಿನ ಇಂಗ್ಲಿಷ್ ಭಾಷೆ ಪರಸ್ಪರ ಸಂವಹನಕ್ಕೆ ಪೂರಕವಾಗಿದೆ. ಹೊಸ ಆವಿಷ್ಕಾರಗಳಿಗೆ ಅಲ್ಲಿನ ಸರ್ಕಾರ ನೀಡುವ ಉತ್ತೇಜನ ನಿಜಕ್ಕೂ ಅದ್ಭುತವಾಗಿದೆ ಎಂದು ಸಂವಾದದಲ್ಲಿ ಮಾತನಾಡಿದ ಇತರ ಉದ್ಯಮಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಭಾರತದ ರಾಯಭಾರ ಕಚೇರಿಯ ಆಕಾಂಕ್ಷಾ ಅವರು ಸಂವಾದವನ್ನು ನಡೆಸಿಕೊಟ್ಟರು.
Key words: Indians –sharing- experience – BTS-2020- Appreciation – innovators …