ಮಂಡ್ಯ,ಸೆಪ್ಟಂಬರ್,23,2021(www.justkannada.in): ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ 45 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸರ್ಕಾರಿ ಉರ್ದು ಶಾಲೆಯನ್ನ ಪ್ರಾರ್ಥನಾ ಮಂದಿರವಾಗಿ ಬದಲಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಹೋರಾಟ ನಡೆಯುತ್ತಿದೆ. ಈ ನಡುವೆ ಸಂತೇಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲೆಯನ್ನು ಪ್ರಾರ್ಥನಾ ಮಂದಿರವಾಗಿ ಬದಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಿ ಉರ್ದು ಶಾಲೆಯನ್ನು ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ. 45 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸರ್ಕಾರಿ ಉರ್ದು ಶಾಲೆಗೆ 20 ವರ್ಷಗಳ ಹಿಂದೆ ಬಿಸಿಯೂಟದ ಅಡುಗೆ ಮನೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಸರ್ಕಾರ ಮಾಡಿಕೊಟ್ಟಿತ್ತು. ಆದರೆ ಈಗ ಈ ಶಾಲೆಗೆ ಮಕ್ಕಳ ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಈ ಶಾಲೆಯನ್ನ ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ವೇಳೆ ಹೊರಗಿನಿಂದ ಬಂದಿರುವ ಕೆಲವು ಧಾರ್ಮಿಕ ಮುಖಂಡರು ಸರ್ಕಾರಿ ಶಾಲೆ ಅತಿಕ್ರಮಣ ಮಾಡಿಕೊಂಡಿದ್ದಾರಂತೆ. ಅಕ್ರಮಕ್ಕೆ ಗ್ರಾಮ ಪಂಚಾಯಿತಿ ಸಾಥ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ.ಇನ್ನು ಶಾಲೆಗೆ ಕೆ.ಆರ್ ಪೇಟೆ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Instead – government Urdu school –prarthana mandir-mandya