ಮೈಸೂರು, ನವೆಂಬರ್ 23,2021(www.justkannada.in): ಜನಪ್ರತಿನಿಧಿಗಳಿಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜನಪ್ರತಿನಿಧಿಗಳು ಖರೀದಿ ವಸ್ತುವಲ್ಲ. ಅವರು ಸಿಟಿ ಮಾರ್ಕೆಟ್ ನಲ್ಲಿ ಸಿಗುವ ಫಿಶ್ ಅಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರು ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯವರು ಸ್ಥಳೀಯ ಜನಪ್ರತಿನಿಧಿಗಳನ್ನು ಖರೀದಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಯಾರೂ ಖರೀದಿ ವಸ್ತುವಲ್ಲ. ಯಾವುದೇ ಖರೀದಿ ಇಲ್ಲ. ಕಾಂಗ್ರೆಸ್ ನವರಿಗೆ ಹೇಳಲು ಬೇರೇನೂ ಇಲ್ಲ. ಕಾಂಗ್ರೆಸ್ ನವರು ಗಾಜಿನ ಮನೆಯಲ್ಲಿ ಕೂತು ಮತ್ತೊಬ್ಬರ ಮನೆಗೆ ಕಲ್ಲು ಎಸೆಯುವುದು ಸರಿಯಲ್ಲ ಎಂದರು.
ಮಂಡ್ಯದಲ್ಲಿ ದಿನೇಶ್ ಗೂಳಿಗೌಡ ಅವರ ಸ್ಪರ್ಧೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ 7-8 ದಿನದ ಹಿಂದೆ ಹೇಳಿದಾಗಲೇ ಗೊತ್ತಾಗಿದ್ದು. ಪಕ್ಷದ ಮುಖಂಡರ ಮಾತಿನ ಮೇರೆಗೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಕಾಂಗ್ರೆಸ್ ನಿಂದ ಮಂಡ್ಯದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ ನಂತರ ಕೆಲಸದಿಂದ ತೆಗೆದು ಪಕ್ಷದ ನಾಯಕರ ಗಮನಕ್ಕೂ ತರಲಾಯಿತು ಎಂದು ಹೇಳಿದರು.
ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ಗೆ ನಿಲ್ಲಿಸುವ ಹೇಯ ಕೆಲಸ ಮಾಡಿಲ್ಲ. ಯಾರು ಏನೇ ಹೇಳಲಿ ನನಗೆ ಆತ್ಮಸಾಕ್ಷಿಯಿದೆ. ನನ್ನ 22 ವರ್ಷ ರಾಜಕೀಯ ಜೀವನದಲ್ಲಿ ಹಲ್ಕಟ್ ರಾಜಕಾರಣ ಮಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇನೆ. ಪಕ್ಷ, ಸರ್ಕಾರ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದರು.
ಮಳೆ ಹಾನಿಯಾಗಿದ್ದರೂ ಬಿಜೆಪಿಗೆ ಚುನಾವಣೆ ಮುಖ್ಯ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾನಿಗೀಡಾದ ಸ್ಥಳಗಳಿಗೆ ಮುಖ್ಯಮಂತ್ರಿಗಳೇ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಸಿಇಒಗಳ ಜೊತೆ ಮಾತುಕತೆ ನಡೆಸಿ ಹಣ ಬಿಡುಗಡೆ ಮಾಡುತ್ತಿದ್ದಾರೆ. 25 ಸ್ಥಾನಗಳಲ್ಲಿ 7 ಕಡೆ ಮಾತ್ರ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದೆಡೆ ಅವರಿಗೆ ಅವಕಾಶವಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿದರು.
ರಘು ಕೌಟಿಲ್ಯ ಅವರು ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಪಡೆಯಲಿದ್ದಾರೆ. ಅವರ ಗೆಲುವಿಗೆ ತಂಡವಾಗಿ ಕೆಲಸ ಮಾಡಲಿದ್ದೇವೆ. ನಾವು ಕೂಡ ಕ್ಷೇತ್ರದಲ್ಲಿ ಉಳಿದು ಅವರ ಗೆಲುವಿಗೆ ಶ್ರಮಿಸಲಿದ್ದೇವೆ. ಚುನಾವಣೆ ಸಂಬಂಧ ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು. ಸಂದೇಶ್ ನಾಗರಾಜ್ ಹಿರಿಯರು, 12 ವರ್ಷ ಕೆಲಸ ಮಾಡಿದ್ದಾರೆ. ವಿಧಾನಪರಿಷತ್ ನಲ್ಲಿ, ಮೈಸೂರು ಮೇಯರ್ ಚುನಾವಣೆಯಲ್ಲಿ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
Key words: insulting- Representatives – Congress- Minister -ST Somashekhar