ಮೈಸೂರು,ಫೆಬ್ರವರಿ,13,2025 (www.justkannada.in): ವ್ಯಕ್ತಿಯೊಬ್ಬನ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಬಳಿ ಪ್ರತಿಭಟಿಸಿ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೆ ಪಿ ಸಿ ಸಿ ವಕ್ತಾರ ಎಂ.ಲಕ್ಷ್ಮಣ ಮಾಡಿರುವ ಆರೋಪ ಗಂಭೀರವಾಗಿದೆ!
300ಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದು ಅದರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದು ತಮ್ಮ ವೇಷ ಮರೆಸಿಕೊಂಡು ಮುಸ್ಲಿಮರಂತೆ ವೇಷ ಧರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
ಈ ಮಾಹಿತಿ ಎಂ ಲಕ್ಷ್ಮಣ ಅವರಿಗೆ ಯಾವಾಗ ದೊರಕಿತು?
ಕಲ್ಲು ತೂರಾಟ ನಡೆಯುವ ಮುನ್ನವೇ ತಿಳಿಯಿತೇ?
ಅಥವಾ ಕಲ್ಲು ತೂರಾಟ ನಡೆಯುವಾಗ ತಿಳಿಯಿತೇ?ಅಥವಾ ಕಲ್ಲು ತೂರಾಟ ನಡೆದ ನಂತರ ತಿಳಿಯಿತೇ?
ಘಟನೆ ನಡೆಯುವ ಮುನ್ನವೇ ಈ ವಿಚಾರ ತಿಳಿದಿದ್ದರೆ ಲಕ್ಷ್ಮಣರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಿಲ್ಲವೇಕೆ?
ಆರ್ ಎಸ್ ಎಸ್ ಕಾರ್ಯಕರ್ತರು ವೇಷ ಮರೆಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಮಾಹಿತಿಯು ಲಕ್ಷ್ಮಣರಿಗೆ ಲಭಿಸಿದ್ದಾದರೂ ಹೇಗೆ?
ಪೊಲೀಸ್ ಗುಪ್ತಚರ ಇಲಾಖೆಗೆ ಸಿಗದ ಮಾಹಿತಿ ಲಕ್ಷ್ಮಣರಿಗೆ ಸಿಕ್ಕಿದೆ ಎಂದರೆ ಲಕ್ಷ್ಮಣರು ಪೊಲೀಸ್ ಗುಪ್ತಚರ ಇಲಾಖೆಗಿಂತಲೂ ಮಿಗಿಲು ಎಂದರ್ಥವಾಗುತ್ತದೆ.
ಪೊಲೀಸ್ ಆಯುಕ್ತರು, ಗೃಹ ಸಚಿವರು, ಅಷ್ಟೇಕೆ? ಮುಖ್ಯಮಂತ್ರಿಗಳಿಗೂ ಸಿಗದ ಈ ವಿಶೇಷ ಗುಪ್ತಚರ ಮಾಹಿತಿಯು ಲಕ್ಷ್ಮಣ ಅವರಿಗೆ ದೊರಕಿದೆಯೆಂದರೆ ಲಕ್ಷ್ಮಣರು ಸೂಪರ್ ಸಿಎಂ ಆಗಿರಲೇಬೇಕು!
ಆರ್ ಎಸ್ ಎಸ್ ಕಾರ್ಯಕರ್ತರು ಮುಸ್ಲಿಮರಂತೆ ವೇಷ ಮರೆಸಿ ಕಲ್ಲು ತೂರಾಟ ನಡೆಸಿದ್ದಾರೆಂಬ ಮಾಹಿತಿ ಲಕ್ಷ್ಮಣರಿಗೆ ತಿಳಿದಿದೆ ಎಂದರೆ ಈ ಘಟನೆಯ ಸಂಪೂರ್ಣ ಮಾಹಿತಿ ಅವರಿಗೆ ತಿಳಿದಿದೆ ಎಂದರ್ಥ!
ತೂರಾಟ ನಡೆಸಲು ಬಳಸಿದ ಕಲ್ಲುಗಳನ್ನು ಎಲ್ಲಿಂದ ತರಲಾಗಿದೆ ಎಂಬ ಮಾಹಿತಿಯೂ ಕೂಡಾ ಲಕ್ಷ್ಮಣರಿಗೆ ತಿಳಿದಿರಲೇಬೇಕು. ಹಾಗಾಗಿ ಲಕ್ಷ್ಮಣರು ಕಲ್ಲು ತೂರಾಟದ ಘಟನೆಯ ವಿಚಾರವಾಗಿ ಮಾಡಿರುವ ಆರೋಪವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಲಕ್ಷ್ಮಣರನ್ನು ಈ ಘಟನೆಯ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿ ಗಂಭೀರವಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಬಹುದು!
ಯಾವುದೇ ಕ್ರಿಮಿನಲ್ ಪ್ರಕರಣದ ವಿಚಾರವಾಗಿ ಪೊಲೀಸರು ನಡೆಸುವ ತನಿಖೆಯ ದಾರಿ ತಪ್ಪಿಸಲು ಸುಳ್ಳು ಮಾಹಿತಿ ನೀಡಿ ಹಾನಿ ಉಂಟು ಮಾಡಲು ಯತ್ನಿಸುವುದು ಭಾರತೀಯ ನ್ಯಾಯ ಸಂಹಿತೆ,2023 ರ ಸೆಕ್ಷನ್ 217 ರ ಅನ್ವಯ ಶಿಕ್ಷಾರ್ಹ ಅಪರಾಧ. ಇಂತಹ ಅಪರಾಧಕ್ಕೆ ಒಂದು ವರ್ಷ ಸೆರೆವಾಸ ಅಥವಾ 10 ಸಾವಿರ ರೂಪಾಯಿ ದಂಡ ಅಥವಾ ಇವೆರಡನ್ನೂ ವಿಧಿಸಬಹುದು..
ಒಂದು ವೇಳೆ ಲಕ್ಷ್ಮಣ ಅವರು ನೀಡಿದ್ದ ಮಾಹಿತಿ ಸುಳ್ಳೆಂದು ಪೊಲೀಸರಿಗೆ ತಿಳಿದ ತಕ್ಷಣ ಪೊಲೀಸರು ಲಕ್ಷ್ಮಣರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ,2023 ರ ಸೆಕ್ಷನ್ 217ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲಿ.
-ಪಿ.ಜೆ.ರಾಘವೇಂದ್ರ
ನ್ಯಾಯವಾದಿ
ಮೈಸೂರು
Key words: Intelligence, M. Lakshman, Indian Penal Code, mysore