ಬೆಂಗಳೂರು,ಮಾರ್ಚ್,3,2025 (www.justkannada.in): ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವು ಮಾರ್ಚ್ 08ನೇ ತಾರೀಖಿನವರೆಗೆ ನಡೆಯಲಿದೆ. ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಚಿತ್ರಿಸಿರುವ “ನೆಲದ ಹಕ್ಕಿಯ ಹಾಡು” ಚಿತ್ರವು ಮಾರ್ಚ್ 07 ರಂದು ಬೆಂಗಳೂರಿನ ಓರಿಯನ್ ಮಾಲ್‌ನಲ್ಲಿ ಸಂಜೆ 4:30 ಕ್ಕೆ ಪ್ರದರ್ಶನಗೊಳ್ಳಲಿದೆ.
ಮೈಸೂರಿನ ರವೀಂದ್ರನಾಥ್ ಠಾಗೂರ್ ನಗರದ ಪತ್ರಕರ್ತರ ಬಡಾವಣೆಯ ಸುತ್ತಮುತ್ತ ಚಿತ್ರಿಸಿರುವ ನೆಲದ ಹಕ್ಕಿಯ ಹಾಡು (An Earthy Ode to Teeyee… Teweet…) ಚಿತ್ರವು ದೇಶ ವಿದೇಶದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಜನರ ಮನ್ನಣೆ ಗಳಿಸಿದೆ. ಹಳದಿ ಟಿಟ್ವಿಭ ಪಕ್ಷಿಯ ಬದುಕಿನ ನೋವು-ನಲಿವುಗಳ ಹೋರಾಟವನ್ನು ಚಿತ್ರಿಸುತ್ತಾ ಮನುಷ್ಯನ ದುರಾಸೆಗಳಿಂದ ರೂಪಗೊಳ್ಳುತ್ತಿರುವ ಅಭಿವೃದ್ಧಿಯ ಸಂಕೇತಗಳನ್ನು ಹಾಗೂ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಸಂಘರ್ಷ, ಸಂಕಟಗಳನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.
ರಾಷ್ಟ್ರಕವಿ ಕುವೆಂಪು ರವರ ಆಶಯವಾದ “ಸರ್ವ ಜನಾಂಗದ ಶಾಂತಿಯತೋಟ” ಎಂಬ ಆಶಯದಲ್ಲಿ ರೂಪುಗೊಂಡಿರುವ ಈ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ನೆಲದ ಹಕ್ಕಿಯ ಹಾಡು ಚಿತ್ರವನ್ನು ಆಹ್ವಾನದ ಮೇರೆಗೆ ಪ್ರದರ್ಶಿಸಲಾಗುತ್ತಿದೆ. ನ್ಯೂಯಾರ್ಕ್ ನಗರದ ವೈಲ್ಡ್‌ಲೈಫ್ ಕನ್ ಸರ್‌ವೇಷನ್ ಫಿಲಂ ಫೆಸ್ಟಿವಲ್, ಚೀನಾ ಇಂಟರ್ ನ್ಯಾಷನಲ್ ಗ್ರೀನ್ ಫಿಲಂ ಫೆಸ್ಟಿವಲ್ ವಿಕ್, ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಇಕೋ ಫಿಲಂ ಫೆಸ್ಟಿವಲ್, ಅಮೇರಿಕಾದ Meplaf ಸೇರಿದಂತೆ 08 ರಾಜ್ಯಗಳಲ್ಲಿ ಯಶಸ್ವಿಯಾಗಿ ಈ ಚಿತ್ರವು ಪ್ರದರ್ಶನಗೊಂಡಿದೆ.
ಇಂಡೋ-ಫ್ರೆಂಚ್ ಇಂಟರ್ ನ್ಯಾಷನಲ್ ಫೆಸ್ಟಿವಲ್, ಹರಿಯಾಣದ ಚಿತ್ರಭಾರತೀ ಫಿಲಂ ಫೆಸ್ಟಿವಲ್, ಮೈಸೂರಿನ ದಸರಾ ಫಿಲಂ ಫೆಸ್ಟಿವಲ್ ಗಳಲ್ಲಿ ಅಧೀಕೃತವಾಗಿ ಆಯ್ಕೆಯಾಗಿ ಚಿತ್ರ ಪ್ರದರ್ಶನಗೊಂಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 07 ರಂದು ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ನಿರ್ದೇಶಿಸಿದ್ದಾರೆ. ಎಂ.ಎನ್.ಸ್ವಾಮಿ ರವರ ಸಂಕಲನ, ಬಾಬು ಈಶ್ವರ್‌ಪ್ರಸಾದ್ ಶಬ್ದಗ್ರಹಣ ನೀಡಿದ್ದಾರೆ. ಗ್ರಾವಿಟಿ-1 ಸಂಸ್ಥೆ ಈ ಚಿತ್ರವನ್ನು ಪ್ರಸ್ತುತಿ ಪಡಿಸಿದೆ.
Key words: International Film Festival, ‘Song of the Ground Bird, March 7th