ಬೆಂಗಳೂರು,ಫೆಬ್ರವರಿ,24,2021(www.justkannada.in): ಜನಪ್ರತಿನಿಧಿಗಳು ಜನರ ಧ್ವನಿಯಾಗಬೇಕು. ಜನರ ಕಷ್ಟ,ಸುಖಗಳಲ್ಲಿ ಭಾಗಿಯಾಗಬೇಕು. ವ್ಯವಸ್ಥೆಯ ಸುಳಿಯಾಗಬಾರದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.
ಸಂಸದೀಯ ಮೌಲ್ಯಗಳ ಕುಸಿತ ಕುರಿತು ವಿವಿಧ ಸಂಸದೀಯ ಗಣ್ಯರ ಆತ್ಮಾವಲೋಕನ ಸಭೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು. ಸಭೆಯಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಬಿಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಸಚಿವರಾದ ಜಗದೀಶ್ವಶೆಟ್ಟರ್, ಅರಂವಿಂದ ಲಿಂಬಾವಳಿ, ಮಾಜಿ ಸಭಾಪತಿ ಶಂಕರಮೂರ್ತಿ, ರಮೇಶ್ ಕುಮಾರ್, ಮಾಜಿ ಸ್ಪೀಕರ್ ಬೋಪಯ್ಯ, ಹೆಚ್.ವಿಶ್ವನಾಥ್, ಶಿವಕುಮಾರ್ ಉದಾಸಿ, ಬಿ.ಎಲ್.ಶಂಕರ್ ವಿ.ಆರ್.ಸುದರ್ಶನ್,ಸಂಸದರು, ಶಾಸಕರು ಹಿರಿಯ ಪತ್ರಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜಕಾರಣಕ್ಕೆ ಬರುವುದೇ ಪುಣ್ಯ. ನೂರರಲ್ಲಿ 10 ಮಂದಿ ರಾಜಕಾರಣಕ್ಕೆ ಬರಬಹುದು. ನಾವು ಹೇಗೆ ನಡೆದುಕೊಳ್ತೇವೆ ಅದು ಮುಖ್ಯ. ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ಮಾಡಬೇಕು. ರಾಜ್ಯ ಈ ವಿಚಾರದಲ್ಲಿ ಮೇಲ್ಪಂಕ್ತಿಯಾಗಬೇಕು. ಸಂವಿಧಾನದ ಜವಾಬ್ದಾರಿಗಳು ಸಾಕಷ್ಟಿವೆ. ಜನರ ಕಷ್ಟ,ಸುಖಗಳಲ್ಲಿ ಭಾಗಿಯಾಗಬೇಕು. ಇದಕ್ಕೆ ಪೂರಕವಾದ ಅಧ್ಯಯನಗಳು ಬೇಕು ಎಂದರು.
ಮುಂದೊಂದು ದಿನ ಅರಾಜಕತೆ ಎದುರಾಗಬಹುದು. ಅಂತಹ ಪರಿಸ್ಥಿತಿ ಬರುವುದನ್ನ ತಡೆಯಬೇಕು. ವಿಶ್ವಮಟ್ಟದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿವೆ. ಹಾಗಾಗಿಯೇ ಈ ಆತ್ಮಾವಲೋಕನ ಸಭೆ ಕರೆದಿದ್ದೇವೆ. ಸಂಸದೀಯ ವ್ಯವಸ್ಥೆ ಹೇಗಿರಬೇಕು. ಜನಪ್ರತಿನಿಧಿಗಳು ಮೌಲ್ಯ ಹೇಗೆ ಕಾಪಾಡಿಕೊಳ್ಳಬೇಕು. ಇದರ ಬಗ್ಗೆ ಆತ್ಮಾವಲೋಕ ಅನಿವಾರ್ಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಬೇಕು- ಚಿಂತಕ ಗುರುರಾಜ ಕರ್ಜಗಿ
ಸಭೆಯಲ್ಲಿ ಮಾತನಾಡಿದ ಚಿಂತಕ ಗುರುರಾಜ ಕರ್ಜಗಿ, ಇವತ್ತಿನ ಮೌಲ್ಯಗಳ ಬಗ್ಗೆ ನಮಗೆ ಬೇಸರವಿದೆ. ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಬೇಕು. ಆದರೆ ಇವತ್ತಿನ ಸನ್ನಿವೇಶ ಆಗಿಲ್ಲ. ಸ್ಟ್ರೀಟ್ ಫೈಟರ್ ರೀತಿ ನಾವು ಅಪಾದಿಸಬಾರದು. ಜನಪ್ರತಿನಿಧಿಗಳು ಮೌಲ್ಯಗಳನ್ನ ಕಾಪಾಡಿಕೊಳ್ಳಬೇಕು. ಜನರನ್ನ ಯಾವಾಗಲೂ ಹಿಡಿದಿಡಲು ಸಾಧ್ಯವಿಲ್ಲ. ಅವರ ಆಕ್ರೋಶದ ಕಟ್ಟೆ ಯಾವಾಗ ಬೇಕಾದರೂ ಹೊಡೆಯಬಹುದು. ಇದನ್ನ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು. ಜನರ ಮನಸ್ಸಿನಲ್ಲಿ ಉಳಿಯುವಂತ ಕೆಲಸ ಮಾಡಿಹೋಗಬೇಕು. ಇಲ್ಲವಾದರೆ ರಾಷ್ಟ್ರಪತಿಯಾದರೂ ಜನ ಗುರ್ತಿಸಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶೋಷಿತರ, ಧಮನಿತರ ಧ್ವನಿಯಾಗಬೇಕು- ಸಿಎಂ ಬಿಎಸ್ ವೈ
ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಈ ಹಿಂದೆ ರಾಜಕೀಯ ಮುತ್ಸದಿಗಳಿದ್ದರು. ಅವರು ದೇಶಕ್ಕಾಗಿ ನಾವು ಎಂಬ ಭಾವನೆಯಲ್ಲಿದ್ದರು. ನಂತರ ಬಂದವರು ದೇಶ ಇರೋದೆ ನಮಗಾಗಿ ಅಂದ್ರು. ಇದೇ ಅಂದು ಇಂದಿನ ವ್ಯಾತ್ಯಾಸ ಎಂದು ಹೇಳಿದರು.
ಜನಪ್ರತಿನಿಧಿಗಳು ಆದರ್ಶಪ್ರಾಯರಾಗಿರಬೇಕು. ಜನಹಿತ ಬಿಟ್ಟು ಸ್ವಾರ್ಥಕ್ಕಾಗಿ ಬಳಸಬಾರದು. ಇದು ಬಸವಣ್ಣನವರ ಆಶಯ. ಜನರಿಂದ ಆರಿಸಿಬಂದವರಿಗೆ ಜನರ ಕಾಳಜಿಯಿರಬೇಕು. ಶೋಷಿತರ, ಧಮನಿತರ ಧ್ವನಿಯಾಗಬೇಕು. ಗಾಂಧಿಯವರ ಸರ್ವೊದಯದ ಕಲ್ಪನೆ ಇರಬೇಕಿದೆ. ಸದನದಲ್ಲಿ ಅಹಿತಕರ ಘಟನೆ ನಡೆಯಬಾರದು. ಆ ರೀತಿ ಸದನದಲ್ಲಿ ನಾವು ನಡೆದುಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಅನುಷ್ಠಾನ ಸಾಧ್ಯ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ಬಳಿಕ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಜನಪ್ರತಿನಿಧಿಗಳು ಯಾರು ದಡ್ಡರಲ್ಲ. ಮುಖ್ಯಮಂತ್ರಿಗಳು ಡಿಬೇಟ್ ನಲ್ಲಿ ಭಾಗವಹಿಸಬೇಕು. ಎಲ್ಲಾ ಪಕ್ಷಗಳನ್ನ ಸಮಾನವಾಗಿ ಕಾಣಬೇಕು. ಎಲ್ಲಾ ಶಾಸಕರನ್ನ ಗೌರವದಿಂದಲೇ ಕಾಣಬೇಕು. ಪ್ರತಿಪಕ್ಷ ನಾಯಕರು ಎಲ್ಲದಕ್ಕೂ ಮಾತನಾಡಬಾರದು. ತಮ್ಮ ಸದಸ್ಯರಿಗೂ ಮಾತನಾಡಲು ಅವಕಾಶ ಕೊಡಬೇಕು. ಒಂದೊಂದು ಪಾರ್ಟಿಗೂ ಕಮಾಂಡ್ ಇರುತ್ತವೆ ಎಂದು ಹೈಕಮಾಂಡ್ ಸಂಸ್ಕೃತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಿಎಂ, ಪ್ರತಿಪಕ್ಷ ನಾಯಕರ ರೋಲ್ ಬಹಳ ಮುಖ್ಯ. ಇಬ್ಬರು ಸರಿಯಾಗಿದ್ದರೆ ಮಾತ್ರ ಸದನ ಸರಿಯಿರುತ್ತೆ. ಸ್ಪೀಕರ್ ಗಳು ಪಾರ್ಟಿ ಪರವಾಗಿ ವರ್ತಿಸಬಾರದು. ಜನರ ಅಭಿಪ್ರಾಯವೂ ಬೇರೆಯಾಗಿದೆ. ಸ್ಟೇಟ್ ಮಟ್ಟದಲ್ಲಿ ಎಥಿಕ್ಸ್ ಕಮಿಟಿ ಇರಬೇಕು. ದೇಶದಲ್ಲಿ ನಮ್ಮ ರಾಜ್ಯದ ಸದನಕ್ಕೆ ಸ್ವಲ್ಪ ಬೆಲೆಯಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.
Key words: Introspection – inevitable – – preserve –values- Speaker- Vishweshwar Hegde Kageri.