ಬೆಂಗಳೂರು,ಫೆಬ್ರವರಿ,13,2025 (www.justkannada.in): ಭಾರತದ ಮೂಲೆ ಮೂಲೆಯಲ್ಲೂ ವೈವಿಧ್ಯಮಯ ಪಾರಂಪರಿಕ ಕುಶಲಕಲೆಗಳಿದ್ದು, ಫ್ಯಾಷನ್ ವಲಯಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಖ್ಯಾತ ವಸ್ತ್ರ ವಿನ್ಯಾಸಕಿ ಅನಾವಿಲಾ ಮಿಶ್ರಾ ಗುರುವಾರ ಹೇಳಿದರು.
‘ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)’ದಲ್ಲಿಂದು ‘ಪರಂಪರೆಯಿಂದ ಮಾರುಕಟ್ಟೆ ಸಂಸ್ಕೃತಿಗೆ’ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಅವರು, ಭಾರತೀಯ ಮಹಿಳೆಯರು ಧರಿಸುವ ಸೀರೆ ಸೌಂದರ್ಯ, ಆತ್ಮವಿಶ್ವಾಸ ಮತ್ತು ದೃಢತೆಯ ಸಂಕೇತವಾಗಿದೆ ಎಂದರು.
ಸೀರೆ ಮನೆಯಲ್ಲಿ ಧರಿಸುವ ದೈನಂದಿನ ವಸ್ತ್ರವಾದರೂ ಫ್ಯಾಷನ್ ಗೆ ಪೂರಕವಾಗಿದೆ; ಇದು ಏಕಕಾಲದಲ್ಲಿ ಪ್ರಾಚೀನವೂ, ಅತ್ಯಾಧುನಿಕವೂ ಆಗಿದೆ. ಸೀರೆ ಬಳಸಿಕೊಂಡು ತಾವು ಮಾಡಿದ ಫ್ಯಾಷನ್ ವಿನ್ಯಾಸ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.
ಭಾರತ ಬಹುಪ್ರಾಚೀನ ಕಾಲದಿಂದಲೂ ಜವಳಿ ಉತ್ಪಾದನೆ ಮತ್ತು ವಿನ್ಯಾಸಕ್ಕೆ ಖ್ಯಾತವಾಗಿದೆ. ಪ್ರಾಚೀನ ರೇಷ್ಮೆ ಮಾರ್ಗ (ಸಿಲ್ಕ್ ರೂಟ್) ಬಟ್ಟೆಯ ಸಾಗಣೆಯಿಂದಾಗಿಯೇ ಪ್ರಸಿದ್ಧವಾಗಿತ್ತು. ಪ್ರಾಚೀನ ಜಗತ್ತಿನಲ್ಲಿ ಭಾರತೀಯ ಜವಳಿಗೆ ಹೆಚ್ಚಿನ ಬೇಡಿಕೆ ಇತ್ತು. ಇಡೀ ಜಗತ್ತು ಭಾರತೀಯ ವಸ್ತ್ರವಿನ್ಯಾಸದ ಆಕರ್ಷಣೆಗೆ ಒಳಗಾಗಿತ್ತು. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಜವಳಿ ವಲಯದಲ್ಲಿ ಭಾರತದ ಹಿರಿಮೆಯನ್ನು ಮತ್ತೆ ಪ್ರತಿಷ್ಠಾಪಿಸಲು ಹೆಚ್ಚಿನ ಅವಕಾಶಗಳಿವೆ ಎಂದರು.
ಕಝಕ್ ಸ್ತಾನದ ಫ್ಯಾಷನ್ ವಿನ್ಯಾಸಕಿ ಐಗಾನಾ ಗಾಲಿ, ಜವಳಿ ವಿನ್ಯಾಸಕಿಯಾಗಿ ತಾವು ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಉದ್ಯಮಿ ಸಂಗೀತಾ ಗೋಷ್ಠಿ ನಿರ್ವಹಿಸಿದರು.
Key words: High demand, Indian textile, design, Anavila Mishra