ಬೆಂಗಳೂರು, ಜುಲೈ ,7, 2022 (www.justkannada.in): ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ, ಅಂದರೆ ನಿನ್ನೆ, ಬೆಂಗಳೂರು ನಗರದಲ್ಲಿರುವ ಜನಪ್ರಿಯ ಔಷಧಗಳ ಕಂಪನಿ ಡೋಲೊ-650 (Dolo-650) ಮಾತ್ರೆಗಳನ್ನು ತಯಾರಿಸುವ ಮೈಕ್ರೊ ಲ್ಯಾಬ್ಸ್ ಮೇಲೆ ದಾಳಿ ನಡೆಸಿತು.
20ಕ್ಕೂ ಹೆಚ್ಚಿನ ಸಂಖ್ಯೆಯ ಐಟಿ ಇಲಾಖಾ ಅಧಿಕಾರಿಗಳು ಒಂದೇ ಬಾರಿಗೆ ಬೆಂಗಳೂರು-ಮೂಲದ ಔಷಧಗಳ ತಯಾರಿಕಾ ಕಂಪನಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿತು.
ಐಟಿ ಇಲಾಖೆಯ ಮೂಲಗಳ ಪ್ರಕಾರ, ಇದೇ ರೀತಿ, ನವದೆಹಲಿ, ಸಿಕ್ಕಿಂ, ಪಂಜಾಬ್, ತಮಿಳುನಾಡು ಹಾಗೂ ಗೋವಾ ಒಳಗೊಂಡಂತೆ 40 ವಿವಿಧ ಸ್ಥಳಗಳಲ್ಲಿ ದೇಶದಾದ್ಯಂತ ಇರುವ ಕಂಪನಿಯ ಇತರೆ ಕಚೇರಿಗಳ ಮೇಲೂ ಸುಮಾರು ೨೦೦ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಕ್ರೋ ಲ್ಯಾಬ್ಸ್ ನ ಸಿಎಂಡಿ, ದಿಲೀಪ್ ಸುರಾನ, ನಿರ್ದೇಶಕ ಆನಂದ್ ಸುರಾನ ಅವರ ಮನೆಗಳ ಮೇಲೂ ಐಟಿ ದಾಳಿ ನಡೆದಿದೆ.
ಐಟಿ ಅಧಿಕಾರಿಗಳು ಮೈಕ್ರೊ ಲ್ಯಾಬ್ಸ್ ಲಿಮಿಟೆಡ್ ನ, ಮಾಧವನಗರದಲ್ಲಿರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯಿಂದ ಹಲವು ಪ್ರಮುಖ ದಾಖಲಾತಿಗಳನ್ನು ಸಂಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ತೆರಿಗೆ ಪಾವತಿಸುವುದನ್ನು ತಪ್ಪಿಸಿಕೊಂಡಿರುವ ಕಾರಣದಿಂದಾಗಿ ಈ ದಾಳಿಯನ್ನು ನಡೆಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಎಲ್ಲಾ ಅಲೆಗಳನ್ನೂ ಸೇರಿದಂತೆ ಈ ಔಷಧಗಳ ತಯಾರಿಸುವ ಕಂಪನಿ ದೊಡ್ಡ ಮಟ್ಟದ ಲಾಭವನ್ನು ಗಳಿಸಿದೆ, ಆದರೆ ಸರಿಯಾದ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.
ಕಂಪನಿಯು ಕೋವಿಡ್ ಸಾಂಕ್ರಾಮಿಕ ಉದ್ಭವಿಸಿದ ೨೦೨೦ ವರ್ಷದಲ್ಲಿ ೩೫೦ ಕೋಟಿ ಡೋಲೊ-650 ಮಾತ್ರೆಗಳನ್ನು ಮಾರಾಟ ಮಾಡಿದ್ದು, ಒಂದೇ ವರ್ಷದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳ ಹೋಲಿಕೆಯಲ್ಲಿ ರೂ.೪೦೦ ಕೋಟಿಗೂ ಹೆಚ್ಚು ಲಾಭವನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ತಜ್ಞರು ತಿಳಿಸಿರುವ ಪ್ರಕಾರ ಡೋಲೊ-೬೫೦ ಪ್ಯಾರಾಸಿಟಾಮಾಲ್‌ಗೆ ಮತ್ತೊಂದು ಹೆಸರಂತಾಗಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: IT –attack- Bangalore -Dolo-650- manufacturer