ಬೆಂಗಳೂರು.ಸೆಪ್ಟಂಬರ್,25,2021(www.justkannada.in): ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಡಿವಾಳರ ಸಂಘ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕರೋನದಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ. ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ. ಹಿಂದುಳಿದವರೇ ಸಂಘಟಿತರಾಗಿ ಸಮ್ಮೇಳನ ಮಾಡಬೇಕು. ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಆದರೆ, ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾರೆ. ಇವನಾರವ ಇವನಾರವ, ಇವ ನಮ್ಮವ ಇವ ನಮ್ಮವ ಎಂದು ವಚನ ಹೇಳುತ್ತಾರೆ. ಆದರೆ, ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆ. ಸಂವಿಧಾನ ಅತ್ಯಂತ ಒಳ್ಳೆಯದು. ಆದರೆ ಸಂವಿಧಾನ ಒಳ್ಳೆಯವರ ಕೈಯಲ್ಲಿರಬೇಕು. ಆಗ ಜನರಿಗೆ ಅನುಕೂಲವಾಗುತ್ತದೆ ಎಂದು ನುಡಿದರು.
ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಮಡಿವಾಳ ಸಮಾಜಕ್ಕೆ ಎಂಎಲ್‌ಸಿ ಸ್ಥಾನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
Key words: It is- not – crime -backward classes – caste conferences -their rights – former CM- Siddaramaiah.