ಬೆಂಗಳೂರು: ಕುವೆಂಪು ಅವರ ತತ್ವಾದರ್ಶ, ವಿಚಾರಧಾರೆ, ಚಿಂತನೆಗಳನ್ನು ಇಂದಿನ ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರು ಅಭಿಪ್ರಾಯಪಟ್ಟರು.
ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಆಧಾರಿತ ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ರಂಗ ಹಾಗೂ ಚಲನಚಿತ್ರ ನಿರ್ದೇಶಕ ರಂಗಸ್ವಾಮಿ ಎಸ್ ಅವರು ಈ ಕೃತಿಯನ್ನು ರಂಗ ರೂಪಕ್ಕೆ ತಂದಿದ್ದಾರೆ.
ಕನ್ನಡದ ಮೇಲಿನ ಅಭಿಮಾನ ಹಾಗೂ ಕನ್ನಡಕ್ಕೆ ಸಂಬಂಧಪಟ್ಟ ಕಳಕಳಿಯ ಬಗ್ಗೆ ಹೆಚ್ಚಿನ ಸಂಖ್ಯೆಯ ಕವಿತೆಗಳನ್ನು ಕುವೆಂಪು ಅವರು ಬರೆದಿದ್ದಾರೆ. ಸಂಗೀತದ ಆನಂದಮಯ ಅನುಭವವನ್ನು ಕುವೆಂಪು ಅವರು ಪಡೆದುಕೊಳ್ಳುತ್ತಿದ್ದರು. ಅನುಭವದಿಂದ ಅನುಭಾವಕ್ಕೆ ಜಾರಲು ಸಂಗೀತದಿಂದ ಸಾಧ್ಯ ಎನ್ನುವುದು ಅವರಿಗೆ ಗೊತ್ತಿತ್ತು. ಇದನ್ನು ರಂಗಸ್ವಾಮಿಯವರು ತಮ್ಮ ನಾಟಕ ಕೃತಿಯಲ್ಲಿ ಅಳವಡಿಸಿರುವುದು ವಿಶೇಷ ಎಂದರು.
ಅಧ್ಯಾಪಕಿ ಎಲ್ ಜಿ ಮೀರಾ ಮಾತನಾಡಿ ಒಂದು ರಂಗಕೃತಿಯ ನಿಜವಾದ ಯಶಸ್ಸು ರಂಗದ ಮೇಲೆ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಪ್ರಶಂಸೆ ಪಡೆದಾಗ ಮಾತ್ರ. ಈಗಾಗಲೇ ಈ ನಾಟಕ 12 ಬಾರಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿ ಉತ್ತಮ ವಿಮರ್ಶೆಗೆ ಒಳಪಟ್ಟು ನಾಟಕವಾಗಿ ತನ್ನ ಸಾರ್ಥಕತೆಯನ್ನು ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಂಗಕರ್ಮಿ ರಂಗಸ್ವಾಮಿ ಎಸ್ ಮಾತನಾಡಿ ಭಾಷೆಯ ಆತ್ಮಗೌರವವನ್ನು ಎತ್ತಿ ಹಿಡಿಯಬೇಕು. ಈ ಹಿನ್ನೆಲೆಯಲ್ಲಿ ಓದುಗರಿಗೆ ನೆಲದ ಭಾಷೆಯ ಸೊಗಡು ಗೊತ್ತಾಗಲೆಂದೇ ಈ ಕೃತಿಯಲ್ಲಿ ಪ್ರಜ್ಞಾಪೂರ್ವಕವಾಗಿ ಆಡುಭಾಷೆಯ ಬಳಕೆ ಮಾಡಿದ್ದೇನೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಹರ್ಷಿತಾ ಪಾಟೀಲ ನಿರ್ವಹಿಸಿದರು.