ಬೆಂಗಳೂರು, ಮೇ 01, 2020 (www.justkannada.in): ಕರ್ನಾಟಕದಲ್ಲಿ ಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತನ್ನಿ ಎಂದು ಒತ್ತಾಯಿಸಿ ಸಚಿವ ಹೆಚ್.ಕೆ.ಪಾಟೀಲ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ. ಇದೇ ಅವಕಾಶವನ್ನು ಬಳಸಿ ಮದ್ಯಪಾನ ನಿಷೇಧ ಜಾರಿಗೆ ತನ್ನಿ ಎಂದು ಪಾಟೀಲ್ ಒತ್ತಾಯಿಸಿದ್ದಾರೆ.
ಕೊರೊನಾ ಅನಿಷ್ಟದಿಂದ ಪ್ರಪಂಚಕ್ಕೆ ಕೇಳರಿಯದ ಹಾನಿಯಾಗಿದೆ. ವಲಸೆ ಕಾರ್ಮಿಕರ ಬವಣೆ ಬೆತ್ತಲಾಗಿದೆ. ಹಸಿವು, ನೋವುಗಳಿಂದ ಶ್ರಮ ಜೀವಿಗಳು ತಳಮಳಗೊಂಡಿದ್ದಾರೆ. ಕೋರೊನಾದಿಂದ ಅಗಿರುವ ಕೆಲವು ಉತ್ತಮ ಬೆಳವಣಿಗೆಗಳನ್ನು ನಾವು ತೀವ್ರ ಗಮನಕ್ಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮದ್ಯಪಾನವನ್ನು ಚಟವಾಗಿ ಮಾಡಿಕೊಂಡವರು ಸ್ವಲ್ಪದಿನ ಕಷ್ಟಪಟ್ಟರೂ ಇದೀಗ ಸಾರಾಯಿ ಇಲ್ಲದೆ ಬದುಕುತ್ತಿದ್ದಾರೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದು, ಇದರಿಂದ ಅನೇಕ ಲಾಭಗಳಿರುತ್ತವೆ. ಮದ್ಯಪಾನದಿಂದ ಆಲಸ್ಯ, ಅಧಿಕಾರ ದುರಪಯೋಗ, ಜಗಳ, ಭ್ರಷ್ಟಾಚಾರ, ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ. ಇದನ್ನು ನಿಷೇಧಿಸುವುದು ಅತ್ಯವಶ್ಯಕ ಎಂದು ಹೆಚ್.ಕೆ.ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.