ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ:  ರಾಜ್ಯ ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ನಾಯಕರು

ಮೈಸೂರು,ಏಪ್ರಿಲ್,7,2025 (www.justkannada.in):  ಹಾಲು, ಮೊಸರು, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಪಕ್ಷ  ಬಿಜೆಪಿ ಮೈಸೂರಿನಿಂದ ಜನಾಕ್ರೋಶ ಯಾತ್ರೆ ಆರಂಭಿಸಿದ್ದಾರೆ.

ಟೌನ್ ಹಾಲ್ ಮುಂಭಾಗ ಬಹಿರಂಗ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಹಲವು ನಾಯಕರು ಮಾತನಾಡಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.

ತಾಯಿ ಚಾಮುಂಡೇಶ್ವರಿ ಸನ್ನಿಧಿ ಮೂಲಕ ಸರ್ಕಾರ ಕಿತ್ತೊಗೆಯುವ ಸಂಕಲ್ಪ:  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬಹಿರಂಗ ಸಭೆಯಲ್ಲಿ  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ,  ಇಂದು ತಾಯಿ ಚಾಮುಂಡೇಶ್ವರಿ ಸನ್ನಿಧಿ ಮೂಲಕ ಈ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪ ಮಾಡಿದ್ದೇವೆ. ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಇತಿಹಾಸ ಸೃಷ್ಟಿ ಮಾಡಿದೆ. ದುರುಳರು,ಸುಳ್ಳುರು ಲಜ್ಜೆಗೆಟ್ಟವರು ನಮ್ಮ ಸಿಎಂ ಮತ್ತು ಡಿಸಿಎಂ. ಹಾಲಿನ ಬೆಲೆ ಜಾಸ್ತಿ, ಹಾಲ್ಕೋ ಹಾಲಿನ ಬೆಲೆ ಜಾಸ್ತಿ ಮಾಡಿ ಜನರನ್ನ ಸಂಕಷ್ಟಕ್ಕೆ ತಳ್ಳಿದ್ದಾರೆ. ಸಾಕಷ್ಟು ಹಗರಣಗಳಿಗೆ ಈ ಸರ್ಕಾರ ಸಿಲುಕಿದೆ. ಒಬ್ಬ ಎಂಎಲ್ಎ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರೂ ಎಂಎಲ್ಎ ಮೇಲೆ ಎಫ್ಐಆರ್ ಆಗಲ್ಲ ಎಂದು ಕಿಡಿಕಾರಿದರು.

ಅಲ್ಲಾವುದ್ದೀನ್ ಖಿಲ್ಜಿಯನ್ನ ಮೀರಿಸುವ ಆಡಳಿತವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ

ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸದಾನಂದ ಗೌಡ, ಲಜ್ಜೆಗೆಟ್ಟಂತ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಲಾವುದ್ದೀನ್ ಖಿಲ್ಜಿಯನ್ನ ಮೀರಿಸುವ ಆಡಳಿತವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರವನ್ನು ಹೊಡೆದೋಡಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಮೈಸೂರು ಮಹಾರಾಜರ ಸನ್ನಿಧಿಯಿಂದ ಜನಾಕ್ರೋಶ ಯಾತ್ರೆ ಆರಂಭಿಸಿದ್ದೇವೆ. ಸಿಎಂ ಅವರು ಇದೇ ಜಿಲ್ಲೆಯವರು. ಮೈಸೂರು ಮಹಾರಾಜರಿಗಿಂತ ಕೊಡುಗೆ ಕೊಟ್ಟಿದ್ದೇವೆ  ಎನ್ನುತ್ತಾರೆ ಶೇಮ್ ಶೇಮ್  ಶೇಮ್. ಕಪ್ಪ ಕಾಣಿಕೆ ಕೊಡುವ ಸಿಎಂ ಸಿದ್ದರಾಮಯ್ಯ. ಹೆಚ್ಚಿನ ಕಪ್ಪ ಕಾಣಿಕೆ ಕೊಟ್ರೆ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರಂತೆ. ಕೊಡಲಿಲ್ಲ ಅಂದ್ರೆ ಕೆಳಗಿಳಿಸುತ್ತಾರಂತೆ. ಈ ಸರ್ಕಾರಕ್ಕೆ ಆಯಸ್ಸಿಲ್ಲ ಈಗಾಗಲೇ ಆಯಸ್ಸು  ಮುಗಿದಿದೆ ಎಂದು ಕಿಡಿಕಾರಿದರು.

ಜನರಿಗೆ ಬೆಲೆ ಏರಿಕೆ ಮಾಡಿ ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ-ಶ್ರೀರಾಮುಲು

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು,  ಸಿದ್ದರಾಮಯ್ಯಗೆ ಈಗಾಗಲೇ ಭಯ ಶುರುವಾಗಿದೆ. 2023 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೇನು ಕೆಲವ ದಿನಗಳಲ್ಲಿ ರಾಜಿನಾಮೆ ಕೊಡಲಿದ್ದಾರೆ. ನವಂಬರ್ ತಿಂಗಳಲ್ಲಿ ರಾಜೀನಾಮೆ ಕೊಡಲಿದ್ದಾರೆ. ಪರಮೇಶ್ವರ್ ಸಿಎಂ ಆಗುವ ಚಿಂತೆ, ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಚಿಂತೆ. ಅವರವರಲ್ಲೇ ಬಡಿದಾಡ ಶುರುವಾಗಿದೆ. ಜನರಿಗೆ ಬೆಲೆ ಏರಿಕೆ ಮಾಡಿ ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದೀರಿ. 2 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ರಾಜ್ಯವನ್ನ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Key words:  janakrosh Yatra, Mysore,  BJP leaders