ಸ್ವಾಮೀಜಿ ವಿರುದ್ದ ಅವಹೇಳನಕಾರಿ ಹೇಳಿಕೆ ಆರೋಪ: ಬಹಿರಂಗ ಕ್ಷಮೆ ಕೇಳಲು ಕೆ.ಎಸ್ ಶಿವರಾಮುಗೆ ಒತ್ತಾಯ

ಮೈಸೂರು,ಡಿಸೆಂಬರ್,17,2024 (www.justkannada.in):  ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಹೇಳಿಕೆ ವಾಪಸ್ ಪಡೆದು ಬಹಿರಂಗ ಕ್ಷಮೆ ಕೇಳಬೇಕು ಎಂದು ಲಿಂಗಾಯತ -ಪಂಚಮ ಸಾಲಿ ಸಮನ್ವಯ ಸಮಿತಿ ಆಗ್ರಹಿಸಿದೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಗಾಯತ -ಪಂಚಮ ಸಾಲಿ ಸಮನ್ವಯ ಸಮಿತಿಯು ಕೆ.ಎಸ್ ಶಿವರಾಮು ಹೇಳಿಕೆಯನ್ನ ಖಂಡಿಸಿ ತಿರುಗೇಟು ನೀಡಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಶಂಭುಪಟೇಲ್,  ಬಾಬಾ ಸಾಹೇಬರು ಕೊಟ್ಟ ಮೀಸಲಾತಿ ಎಂಬ ತಟ್ಟೆಯಲ್ಲಿ ನಾವೂ ಒಂದು ತುತ್ತು ಕೇಳುತ್ತಿದ್ದೇವೆ ಅಷ್ಟೇ. ನಾವು ಉಳುಮೆ, ವ್ಯವಸಾಯ ಮಾಡಿ ದುಡಿಮೆ ಮಾಡಿಕೊಂಡು ಬದುಕುವ ಸಮುದಾಯ. ನಮ್ಮ ಸಮುದಾಯದಲ್ಲೂ ಬಡವರು ಇದ್ದಾರೆ. 2ಎ ಮೀಸಲಾತಿ ಕೇಳುವುದರಲ್ಲಿ ಏನು ತಪ್ಪಿದೆ. ಅಷ್ಟಕ್ಕೂ ನಾವು ನಿಮಗೆ ಕೊಟ್ಟಿರುವ ಮೀಸಲಾತಿಯನ್ನ ನಾವು ಕಿತ್ತುಕೊಳ್ಳುತ್ತಿಲ್ಲ. ನಮಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಶಿವರಾಮು ನಮ್ಮ ಸಮುದಾಯ ಬಗ್ಗೆ ನಮ್ಮ ಸ್ವಾಮೀಜಿಗಳ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವುದು ಖಂಡನೀಯ. ಕೆಎಸ್ ಶಿವರಾಮು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಕೈ ಕಡಿಯುತ್ತೇವೆ ಎಂಬ ಹೇಳಿಕೆ ವಾಪಸ್ ಪಡೆಯಬೇಕು. ಮೈಸೂರಿನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ ನೀವು ಅಲ್ಲಿಗೆ ಬನ್ನಿ ನೋಡೋಣ. ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ದಯಾನಂದ ಪಟೇಲ್,ಆರ್.ವಿ ಪಾಟೀಲ್,ಡಾ.ರಾಜೇಶ್ ಮತ್ತು ಮಧು ಭಾಗಿಯಾಗಿದ್ದರು.

2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಕೈ ಹಾಕಿದ್ರೆ ಕೈ ಕಡಿಯಬೇಕಾಗುತ್ತದೆ ಎಂದು  ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಎಸ್ ಶಿವರಾಮು ಹೇಳಿಕೆ ನೀಡಿದ್ದರು.

Key words: Jaya Mrityunjaya Swamiji, K.S. Shivaramu, panchamasali