ಬೆಂಗಳೂರು, ಅಕ್ಟೋಬರ್,9,2024 (www.justkannada.in): ಸುಮಾರು 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿರುವ ನರ್ಸ್ ಗಳನ್ನ ಕಾಯಂಗೊಳಿಸದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ , ಹೃದ್ರೋಗ ಸಂಸ್ಥೆಯ ಹೃದಯವೇ ಸೂಕ್ತ ಜಾಗದಲ್ಲಿಲ್ಲ ಎಂದು ಮಾರ್ಮಿಕವಾಗಿ ಟೀಕಿಸಿದೆ.
ಬಿ.ಜೆ. ರಾಣಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ಎಸ್. ಸಂಜಯಗೌಡ ಅವರಿದ್ದ ಏಕಸದಸ್ಯ ಪೀಠವು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ನರ್ಸ್ ಗಳ ನೆರವಿಗೆ ಧಾವಿಸಿದ್ದು, ನರ್ಸ್ ಗಳ ಸೇವೆ ಕಾಯಂಗೊಳಿಸುವಂತೆ ಆದೇಶಿಸಿದೆ.
”ಅರ್ಜಿದಾರರು 20 ವರ್ಷಕ್ಕೂ ಅಧಿಕ ಸಮಯದಿಂದ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ (ಸ್ಟೈಪೆಂಡರಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆ ಕಾಯಂಗೊಳಿಸಬೇಕು. ಹತ್ತು ವರ್ಷ ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನ ಬ್ರೇಕ್ ಅವಧಿ ಪರಿಗಣಿಸಬಾರದು,” ಎಂದು ಜಯದೇವ ಸಂಸ್ಥೆಗೆ ನಿರ್ದೇಶನ ನೀಡಿದೆ.
ಈ ವೇಳೆ ವಾದ ಮಂಡಿಸಿರುವ ಜಯದೇವ ಹೃದ್ರೋಗ ಸಂಸ್ಥೆಯ ಪರ ವಕೀಲರು, ”ಅರ್ಜಿದಾರರನ್ನು ಮಂಜೂರಾದ ಹುದ್ದೆಗಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡಿರಲಿಲ್ಲ. ಹಾಗಾಗಿ, ಅವರ ನೇಮಕಾತಿ ಕಾಯಂಗೊಳಿಸಲಾಗದು. ಸ್ಟಾಫ್ ನರ್ಸ್ (ಸ್ಟೈಪೆಂಡರಿ) ಎಂಬ ಕಾಯಂ ಹುದ್ದೆಗಳಿಲ್ಲ. ಹಾಗಾಗಿ, ವೃಂದ ಮತ್ತು ಶ್ರೇಣಿ ನೇಮಕ ನಿಯಮದಂತೆ ಸೇವೆ ಕಾಯಂಗೆ ಅರ್ಜಿದಾರರು ಅರ್ಹರಲ್ಲ,” ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಆದರೆ ಈ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್ ನ್ಯಾಯಪೀಠವು, ನರ್ಸ್ ಗಳ ಸೇವೆ ಕಾಯಂಗೊಳಿಸಲಾಗದು ಎಂದು ಜಯದೇವ ಸಂಸ್ಥೆ ನೀಡಿದ್ದ ಹಿಂಬರಹ ರದ್ದುಗೊಳಿಸಿತು. ”ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನರ್ಸ್ ಗಳು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸಂಸ್ಥೆ ಅನಾರೋಗ್ಯಕರ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ, ಅದರ ಹೃದಯ ತನ್ನ ಸಿಬ್ಬಂದಿಯ ಕಾಯಿಲೆಗಳನ್ನು ಗುಣಪಡಿಸುವ ಸೂಕ್ತ ಜಾಗದಲ್ಲಿ ಇಲ್ಲ ಎಂಬುದನ್ನು ಸೂಚಿಸುತ್ತಿದೆ,” ಎಂದು ಸಂಸ್ಥೆಯ ಕಾರ್ಯವೈಖರಿಯನ್ನು ಟೀಕಿಸಿತು.
‘ಸಮಾನ ವೇತನಕ್ಕೆ ಸಮಾನ ಕೆಲಸ’ ಎಂಬ ಸಾಂವಿಧಾನಿಕ ನಿಯಮ ಉಲ್ಲಂಘನೆ
”ಅರ್ಜಿದಾರರನ್ನು ಮೊದಲಿಗೆ 2004ರಲ್ಲಿ ಸ್ಟಾಫ್ ನರ್ಸ್ (ಸ್ಟೈಪೆಂಡರಿ) ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು. ಅವರು ಕಳೆದೆರಡು ದಶಕಗಳಿಂದ ನಿರಂತರವಾಗಿ ಮಾಮೂಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರಿಗೆ ಕಡಿಮೆ ವೇತನ ನೀಡಿ, ಸವಲತ್ತುಗಳನ್ನು ಕಲ್ಪಿಸದೆ, ‘ಸಮಾನ ವೇತನಕ್ಕೆ ಸಮಾನ ಕೆಲಸ’ ಎಂಬ ಸಾಂವಿಧಾನಿಕ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ,” ಎಂದು ನ್ಯಾಯಪೀಠ ಹೇಳಿದೆ.
ಹಾಗೆಯೇ ”ರಾಜ್ಯದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದೆನಿಸಿರುವ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಬೇಕು. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಮತ್ತು ಆರೋಗ್ಯ ಸಚಿವರು ಸಹ ಅಧ್ಯಕ್ಷರಾಗಿರುವ ಗವರ್ನಿಂಗ್ ಕೌನ್ಸಿಲ್ ಆಡಳಿತ ನಿರ್ವಹಣೆ ನೋಡಿಕೊಳ್ಳುವ ಸಂಸ್ಥೆ ತನ್ನ ನರ್ಸ್ ಗಳ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳದೆ ಅವರಿಗೆ ಕಿರುಕುಳ ನೀಡುತ್ತಿದೆ,” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕೃಪೆ
ಲಾಗೈಡ್ ಕಾನೂನು ಮಾಸಪತ್ರಿಕೆ
key words: Jayadeva hospital, Heart, High Court