ಮೈಸೂರು,ಫೆಬ್ರವರಿ,13,2021(www.justkannada.in): ಈ ಬಾರಿಯೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಫಿಕ್ಸ್. ಈ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ತನ್ವೀರ್ ಸೇಠ್, ಶಾಸಕ ಸಾ.ರಾ ಮಹೇಶ್ ಹಾಗೂ ನನ್ನ ನಡುವೆ ಒಪ್ಪಂದ ಆಗಿದೆ. ಐದು ವರ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿತ್ತು. ನಮ್ಮ ಪಕ್ಷದ ನಗರಾಧ್ಯಕ್ಷರು ಹಾಗೂ ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದ ಆಗಿದೆ. ಹೀಗಾಗಿ ಸ್ಥಳೀಯವಾಗಿ ಈ ಮೈತ್ರಿ ಮುಂದುವರೆಯುತ್ತೆ. ನಿನ್ನೆ ಶಾಸಕ ಸಾ.ರಾ ಮಹೇಶ್ ಸಭೆ ನಡೆಸಿದ್ದಾರೆ. ಇಂದು ನಗರಕ್ಕೆ ಸಿಎಂ ಆಗಮಿಸುತ್ತಿರುವುದರಿಂದ ಆ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದೀನಿ. ಬಳಿಕ ಸಾರಾ ಮಹೇಶ್ ಜೊತೆ ಮತ್ತೆ ಮಾತುಕತೆ ನಡೆಸುತ್ತೇನೆ ಎಂದರು.
ಕಾಂಗ್ರೆಸ್ ಯಾರ ಜೊತೆಗೂ ಮೈತ್ರಿ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ರಾಜ್ಯ ವಲಯದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾನ ರಾಜ್ಯ ಮಟ್ಟಕ್ಕೆ ಸೀಮಿತ. ಸ್ಥಳೀಯ ಪರಿಸ್ಥಿತಿಗನುಗುಣವಾಗಿ ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಪಕ್ಷದ ವರಿಷ್ಠ ಸಹಮತ ಕೂಡಾ ಇರುತ್ತೆ. ಸ್ಥಳೀಯ ವಿಚಾರಗಳು, ಪರಿಸ್ಥಿತಿ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡುತ್ತೇವೆ. ಅವರ ಅನುಮತಿ ಪಡೆದು ಮೈತ್ರಿ ಮುಂದುವರೆಸುತ್ತೇವೆ ಎಂದರು.
ಮೈಸೂರು ಮೇಯರ್ – ಉಪಮೇಯರ್ ಮೀಸಲಾತಿ ಪ್ರಕಟ ಹಿನ್ನೆಲೆ ಈ ಕುರಿತು ಟೀಕಿಸಿರುವ ತನ್ವೀರ್ ಸೇಠ್, ಇದೊಂದು ರಾಜಕೀಯ ಪ್ರೇರಿತ ಮೀಸಲಾತಿ. ರಾಜಕೀಯ ಹಿನ್ನೆಲೆ ಇಟ್ಟುಕೊಂಡು ಸಾಮಾನ್ಯ ಮಹಿಳಾ ಮೀಸಲಾತಿ ಪ್ರಕಟವಾಗಿದೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಪ್ರಕಟವಾಗಿತ್ತು. ಈ ಬಾರಿಯೂ ಪುನರಾವರ್ತನೆಯಾಗಿದೆ ಎಂದರೆ ಇದು ಇತರೆ ಸಮುದಾಯಗಳಿಗೆ ಹಿನ್ನೆಡೆಯಾದಂತೆ. ಈ ವಿಚಾರವಾಗಿ ವ್ಯಾಜ್ಯ ಹೂಡುವ ಸಾಧ್ಯತೆ ಇದೆ. ದಾವಣಗೆರೆ, ತುಮಕೂರು ನಗರಸಭೆಗಳಲ್ಲಿ ಇದೆ ರೀತಿಯ ವ್ಯತ್ಯಾಸವಾಗಿತ್ತು. ಈ ಬಗ್ಗೆ ಪ್ರಶ್ನಿಸಿ ಸ್ಥಳೀಯರು ವ್ಯಾಜ್ಯ ಹೂಡಲು ಮುಂದಾಗಿದ್ದಾರೆ. ಮೈಸೂರಿನಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದರು.
Key words: JDS-Congress- alliance- fix –mysore city corporation-MLA -Tanveer Sait