ಬೆಂಗಳೂರು,ನವೆಂಬರ್,10,2020(www.justkannada.in): ಶಿರಾ ಮತ್ತು ಆರ್,ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿದ ಹಿನ್ನೆಲೆ ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿಕೆ, ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ.
ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ ಎಂದಿದ್ದಾರೆ.
ಹಾಗೆಯೇ ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ ಎಂದು ಹೆಚ್.ಡಿಕೆ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Key words: JDS -defeat – two by-elections-Former CM- HD Kumaraswamy – Twitter.