ದಸರಾ ವೇದಿಕೆಯಲ್ಲಿ ಜಿ.ಟಿ.ಡಿಯ ಹೊಸ ಗಾನ – ಭಜನಾ “ ಮುಸ್ತಾಫ ಮುಸ್ತಾಫ ಡೋಂಟ್‌ ವರಿ ಮುಸ್ತಾಫ..”

Mysore jds leader g.t.devegowda willing to join congress shortly

 

ಮೈಸೂರು, ಅ.04,2024: (www.justkannada.in news)  ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಜೆಡಿಎಸ್‌ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರ ಭಾಷಣ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ನಾಯಕರಲ್ಲಿ ಹುಮ್ಮಸ್ಸು ಹೆಚ್ಚಿಸಿದ್ದು ಸುಳ್ಳಲ್ಲ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ ಆರಂಭಿಸಿರುವ ವೇಳೆಯಲ್ಲೇ ಜೆಡಿಎಸ್‌ ನ ಹಿರಿಯ ಮುಖಂಡ ಜಿ.ಟಿ.ದೇವೇಗೌಡ ಅವರು ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದು ಮೈತ್ರಿ ಪಕ್ಷಗಳಿಗೆ ನುಂಗಲಾರದ ತುತ್ತು.

ಯಾವುದೋ ಕೆಲಸಕ್ಕೆ ಬಾರದ ಸಂಗತಿಯನ್ನು ದೊಡ್ಡದಾಗಿ ಬಿಂಬಿಸುತ್ತಾ ರಾಜಕಾರಣ ಮಾಡುತ್ತಿರುವ ಬಿಜೆಪಿ-ಜೆಡಿಎಸ್‌ ಗೆ ವೇದಿಕೆಯಲ್ಲಿ ಬಹಿರಂಗವಾಗಿ ತರಾಟೆ ತೆಗೆದುಕೊಂಡ ಜಿಟಿಡಿ, ರಾಜ್ಯ ಅಭಿವೃದ್ಧಿಗೆ ಸಹಕರಿಸುವುದು ಬಿಟ್ಟು ಈರೀತಿ ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿವಿಹಿಂಡಿದ್ದು ವಿಶೇಷ.

ಜಿ.ಟಿ.ದೇವೇಗೌಡ ಅವರ ಈ ದಿಢೀರ್‌ ವರಸೆಗೆ ಏನು ಕಾರಣ…?

ರಾಜಕಾರಣದ ಹಿನ್ನೆಲೆ ಗಮನಿಸುವುದಾದರೆ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಪುರಾತನ ಕಾಲದಿಂದಲೂ ಫ್ರೆಂಡ್ಸ್.‌ ೧೯೭೮ ರಲ್ಲಿ ಈ ಇಬ್ಬರು ಏಕಕಾಲದಲ್ಲೇ ರಾಜಕೀಯಕ್ಕೆ ಎಂಟ್ರಿ ಪಡೆದವರು. ಆರಂಭದ ದಿನಗಳಲ್ಲಿ ಅಂದ್ರೆ ೧೯೮೩ ರಲ್ಲಿ ಸಿದ್ದರಾಮಯ್ಯ-ಜಿಟಿಡಿ ಒಟ್ಟಾಗಿಯೇ ಚುನಾವಣೆಗಳನ್ನು ಎದುರಿಸಿದವರು. ಇದು ೨೦೦೬ ರ ತನಕ ಮುಂದುವರೆದಿತ್ತು. ಯಾವಾಗ ಸಿದ್ದರಾಮಯ್ಯ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು ಆಗ ಜಿ.ಟಿ.ದೇವೇಗೌಡ ಜೆಡಿಎಸ್‌ ನಲ್ಲೇ ಉಳಿದುಕೊಂಡರು.

೨೦೧೮ ರಲ್ಲಿ ಚಾಮುಂಡೇಶ್ವರಿ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳು. ಈ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಗೆಳೆಯ ಸಿದ್ದರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸುತ್ತಾರೆ.  ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಮತ್ತೆ ಸಿದ್ದರಾಮಯ್ಯ ಹಾಗೂ ಜಿಟಿಡಿ ನಡುವಿನ ಸ್ನೇಹ ಚಿಗುರೊಡೆಯುತ್ತದೆ.

ಇದೇನಿದು ಗೌಡರ ಗದ್ಲ :

೨೦೦೪ ರಲ್ಲಿ ಕಾಂಗ್ರೆಸ್‌ ಜತೆ ಸೇರಿ ಜಿಡಿಎಸ್‌ ಆಡಳಿತಕ್ಕೆ ಬಂದಾಗ ಜಿ.ಟಿ.ದೇವೇಗೌಡ ಅವರು ಸಚಿವ ಸ್ಥಾನದಿಂದ ವಂಚಿತರಾಗುತ್ತಾರೆ. ಬಳಿಕ ಮುಂದಿನ ಚುನಾವಣೆಯಲ್ಲಿ  ಬಿಜೆಪಿಗೆ ಸೇರ್ಪಡೆಗೊಂಡ ಜಿಟಿಡಿ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ. ನಂತರ ೨೦೧೩ ರಲ್ಲಿ ಮತ್ತೆ ಜೆಡಿಎಸ್‌ ಗೆ ಹಿಂದಿರುಗುತ್ತಾರೆ.

೨೦೨೩ ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿ.ಡಿ.ದೇವೇಗೌಡ ಮತ್ತೆ ಕಾಂಗ್ರೆಸ್‌ ಸೇರ್ಪಡೆಗೆ ವೇದಿಕೆ ಸಿದ್ಧವಾಗಿರುತ್ತದೆ. ಆದರೆ ಟಿಕೆಟ್‌ ವಿಷಯದಲ್ಲಿ ಒಮ್ಮತಕ್ಕೆ ಬಾರದೆ ಈ ಆಲೋಚನೆ ಕಾರ್ಯರೂಪಕ್ಕೆ ಬರಲಿಲ್ಲ. ಶಾಸಕ ಹಾಗೂ ಸಂಸದ ಸ್ಥಾನದ ಎರಡು ಟಿಕೆಟ್‌ ಗಳಿಗೆ ಜಿಟಿಡಿ ಬೇಡಿಕೆ ಇಟ್ಟಿರುತ್ತಾರೆ. ಪುತ್ರ ಜೆ.ಡಿ.ಹರೀಶ್‌ ಗೌಡ ರನ್ನು ರಾಜಕೀಯಕ್ಕೆ ಕರೆತರುವುದು ಜಿಟಿಡಿ ಉದ್ದೇಶವಾಗಿತ್ತು. ಆದರೆ ಕಾಂಗ್ರೆಸ್‌, ಶಾಸಕ ಸ್ಥಾನ ಅಥವಾ ಸಂಸದ ಸ್ಥಾನ ಯಾವುದಾದರೊಂದನ್ನು ನೀಡುವ ಭರವಸೆ ನೀಡಿತ್ತು. ಅಷ್ಟರಲ್ಲಿ ವಿಷಯ ತಿಳಿದ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಖುದ್ದು ಜಿ.ಟಿ.ದೇವೇಗೌಡ ಅವರ ನಿವಾಸಕ್ಕೆ ಆಗಮಿಸಿ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ. ನಿರೀಕ್ಷೆಯಂತೆ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿಯಿಂದ ಹಾಗೂ ಪುತ್ರ ಹರೀಶ್‌ ಗೌಡ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.

ಅಸಮಧಾನ :

ಜಿ.ಟಿ.ದೇವೇಗೌಡ ಅವರಿಗೆ ಶಿಕ್ಷಣ ಖಾತೆಯನ್ನು ನೀಡುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಲಾಗುತ್ತದೆ. ಈ ಖಾತೆ ಬೇಡ ಎಂದು ಎಷ್ಟೆ ಪ್ರತಿರೋಧ ವ್ಯಕ್ತಪಡಿಸಿದರು, ಜಗ್ಗದ ಜೆಡಿಎಸ್‌ ಹೈಕಮಾಂಡ್‌ , ಜಿಟಿಡಿಗೆ ಉನ್ನತ ಶಿಕ್ಷಣ ಖಾತೆ ನೀಡುತ್ತಾರೆ. ಇದರಿಂದ ಹಲವಾರು ಸಂದರ್ಭಗಳಲ್ಲಿ ಸಚಿವರಾಗಿ ಜಿಟಿಡಿ ಇರಿಸು ಮುರಿಸು ಎದುರಿಸುವಂತಾಗುತ್ತದೆ. ಇದು ಪಕ್ಷದ ಹೈಕಮಾಂಡ್‌ ಬಗ್ಗೆ ಮುನಿಸಿಗೆ ಕಾರಣವಾಯಿತು.

ಬಳಿಕ ಈಗ ೨೦೧೩ ರ ಚುನಾವಣೆ ನಂತರ ಜಿ.ಟಿ.ದೇವೇಗೌಡ ಅವರಿಗೆ ಮೈತ್ರಿ ಸರಕಾರದ ಅವಧಿಯಲ್ಲಿ ಕೋರ್‌ ಕಮಿಟಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಮೇಲೆ ಜೆಡಿಎಲ್‌ ಪಿ ಸ್ಥಾನ ಕಾಲಿಯಾಗುತ್ತದೆ. ಪಕ್ಷದ ಹಿರಿಯನಾದ ನನಗೆ ಈ ಜವಾಬ್ದಾರಿ ನೀಡುತ್ತಾರೆ ಎಂದು ಜಿ.ಟಿ.ದೇವೇಗೌಡ ವಿಶ್ವಾಸದಲ್ಲಿರುತ್ತಾರೆ. ಆದರೆ  ಜಿಟಿಡಿಗೆ ಮತ್ತೆ ನಿರಾಸೆ.

ಈ ಬೆಳವಣಿಗೆ ಬಳಿಕ ಪಕ್ಷದ ನಾಯಕರಿಂದ, ಪಕ್ಷದ ಕಾರ್ಯಕ್ರಮಗಳಿಂದ ಜಿಟಿಡಿ ಅಂತರ ಕಾಯ್ದುಕೊಳ್ಳಲು ಮುಂದಾಗುತ್ತಾರೆ. ಇದೀಗ ದಸರಾ ವೇದಿಕೆಯಲ್ಲಿ ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರ ಪರ ಬ್ಯಾಟ್‌ ಬೀಸುವ ಮೂಲಕ ಪಕ್ಷದ ನಾಯಕರಿಗೆ ರೆಬಲ್‌ ಸಂದೇಶ ನೀಡಿದ್ದಾರೆ.

ಹೈಕಮಾಂಡ್‌ ಅಭಯ ಹಸ್ತ :

ಕಾಂಗ್ರೆಸ್‌ ಹೈಕಮಾಂಡ್‌ ನ ದಿಲ್ಲಿ ನಾಯಕರೊಬ್ಬರು ಜಿ.ಟಿ.ಡಿ ಪಕ್ಷ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದು, ಈ ಸಂಬಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಕಾರಣ, ಜಿ.ಟಿ.ದೇವೇಗೌಡ ಆಕ್ರಮಣಕಾರಿ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದಾರೆ.

key words: Mysore, jds leader, g.t.devegowda, join, congress , shortly