ನಾಳೆಯಿಂದ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೆ…

ಬೆಂಗಳೂರು,ಆ,13,2020(www.justkannada.in):  ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗೆ ನಮ್ಮ ವಿರೋಧವಿದೆ. ಹೀಗಾಗಿ  ನಾಳೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸರ್ಕಾರ ತಂದಿರುವ ಮೂರು ಕಾಯ್ದೆಗಳಿಗೆ ನಮ್ಮ ಸಮ್ಮತಿ ಇಲ್ಲ.‌ ಈ ಕಾಯಿದೆಗಳನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನ ನಾವು ವಿರೋಧ ಮಾಡ್ತೀವಿ. ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡಲು ನಾವು ಸಿದ್ದವಾಗಿದ್ದೇವೆ.ಈ ಸಂಬಂಧ ರಾಜ್ಯಾದ್ಯಂತ ನಾಳೆಯಿಂದ ಪ್ರತಿಭಟನೆ ಮಾಡ್ತೀವಿ. ನಾಳೆ ಪ್ರತಿಭಟನೆಗೆ ಹಾಸನದಲ್ಲಿ ಇದಕ್ಕೆ ಚಾಲನೆ ಕೊಡುತ್ತೇವೆ. ಕೊರೋನಾ ಮಾರ್ಗಸೂಚಿ ನಿಯಮದ ಅನ್ವಯವೇ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.jk-logo-justkannada-logo

ನಾನು, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಹೀಗೆ ಬೆರಳೆಣಿಕೆ ಮಂದಿ ಮಾತ್ರ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಹಾಸನದಲ್ಲಿ ನಾಳೆ 200 ಜನ ಮಾತ್ರ ಹೋರಾಟದಲ್ಲಿ ಭಾಗವಹಿಸುತ್ತಾರೆ. ಒಂದು ಕಡೆ ಕುಳಿತುಕೊಂಡು ಪ್ರತಿಭಟನೆ ಮಾಡುತ್ತೇವೆ. ಐದಾರು ಜನ ಮುಖಂಡರು ಹೋಗಿ  ಡಿಸಿಗೆ ಮನವಿ ಪತ್ರ ಕೊಡ್ತೀವಿ. ಅದನ್ನ ರಾಜ್ಯಪಾಲರಿಗೆ ಕಳಿಸಿ ಕೊಡುವಂತೆ ಡಿಸಿ ಅವರಿಗೆ ಮನವಿ ಮಾಡುತ್ತೇವೆ. 30 ಜಿಲ್ಲೆಗಳಲ್ಲಿ ಈ ಹೋರಾಟ ಹಂತ ಹಂತವಾಗಿ ಮಾಡಲಾಗುತ್ತದೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕವಾಗಿದೆ , ಸಣ್ಣ , ಮಧ್ಯಮ ವರ್ಗದ ರೈತರಿಗೆ ಇದರಿಂದ ಅನ್ಯಾಯವಾಗುತ್ತದೆ.  ಕೈಗಾರಿಕೆ ಕಾಯ್ದೆಯೂ ಅತ್ಯಂತ ಅಪಾಯಕಾರಿ. ಜಮೀನು ಪಡೆದು ಮುಂದೆ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಜನತೆಗೆ ಅನಾನುಕೂಲವೇ ಹೆಚ್ಚು ಎಂದು ಹೆಚ್.ಡಿ ದೇವೇಗೌಡ ಹೇಳಿದರು.

ಎಪಿಎಂಸಿ ಕಾಯ್ದೆಯಿಂದ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಸಂಸತ್ ನಲ್ಲಿ ಈ ಬಗ್ಗೆ ಹೋರಾಟ ಮಾಡ್ತೀನಿ.  ಕಾಯ್ದೆ ರಾಜ್ಯ ಸರ್ಕಾರ  ಜಾರಿಗೆ ತಂದಿದೆ. ಹೀಗಾಗಿ ಇಲ್ಲಿಯೇ ಪ್ರತಿಭಟನೆ ಮಾಡುತ್ತೇವೆ.  ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ. 30 ಜಿಲ್ಲೆಗೆ ನಾನೇ‌ ಹೋಗುವುದಕ್ಕೆ ಆಗಲ್ಲ. ರಾಜ್ಯಾಧ್ಯಕ್ಷರು, ಆಯಾ ಭಾಗದ ಶಾಸಕರು, ಮಾಜಿ ಶಾಸಕರು, ಪರಿಷತ್ ಸದ್ಯಸರು ಜಿಲ್ಲೆಗಳಲ್ಲಿ ಹೋರಾಟ ಮಾಡ್ತಾರೆ. ಮುಂದಿನ ವಾರದಲ್ಲಿ 30 ಜಿಲ್ಲೆಗಳಲ್ಲಿ ಹೋರಾಟ ಮಾಡ್ತೀವಿ. ಮಾಜಿ ಸಿಎಂ ಕುಮಾರಸ್ವಾಮಿ, ನಾನು, ಜೆಡಿಎಸ್ ರಾಜ್ಯಾಧ್ಯಕ್ಷರು ಹೋರಾಟದ ಮುಂಚೂಣಿಯಲ್ಲಿ ಭಾಗವಹಿಸಲಿದ್ದೇವೆ ಎಂದು ಹೆಚ್.ಡಿ ದೇವೇಗೌಡರು ಮಾಹಿತಿ ನೀಡಿದರು.

ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲಿನ ದಾಳಿ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲಿನ ದಾಳಿ ಪ್ರಕರಣ ದುರದೃಷ್ಟಕರ ದೇಶದ ಯಾವ ಭಾಗದಲ್ಲೂ ಇಂಥ ಪ್ರಕರಣ ನಡೆಯಬಾರದು, ದೊಂಬಿ ಗಲಾಟೆ ಘಟನೆ ಸಂಬಂಧ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು? ಇವರಲ್ಲಿ ಎಲ್ಲರೂ ಅಪರಾಧಿಗಳು ಇರಲಿಕ್ಕೆ ಸಾಧ್ಯವಿಲ್ಲ ಅದರಿಂದ ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡ  ಎಂದು ಪೊಲೀಸರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.

ಈ ಕೇಸ್ ಸಿಬಿಐಗೆ ವಹಿಸಿ ಅಂತ ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದಾರೆ , ಈಗಿರುವ ಆಯುಕ್ತರು ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ, ಹೀಗಾಗಿ ಅವರು ತಾರತಮ್ಯ ಮಾಡೊಲ್ಲ ಅನ್ನುವುದು ನನ್ನ ಭಾವನೆ. ಅಂತಿಮ ನಿರ್ಧಾರ ಸರ್ಕಾರವೇ ತೆಗೆದುಕೊಳ್ಳಲಿ. ನಿಜವಾದ ಕಿಡಿಗೇಡಿಗಳ ವಿರುದ್ದ ಸರ್ಕಾರ ಕ್ರಮ ತಗೋಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು.

Key words: JDS –protests- tomorrow – -former Prime Minister- HD Deve Gowda