ಜಿಮ್ ಇನ್ವೆಸ್ಟ್ ಕರ್ನಾಟಕ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗಿಗಳಿಗೆ ಸುವರ್ಣಾವಕಾಶ

ಬೆಂಗಳೂರು,ಫೆಬ್ರವರಿ,13,2025 (www.justkannada.in):  ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ ಸುಮಾರು 10 ಲಕ್ಷ ಉದ್ಯೋಗಿಗಳ ಅಗತ್ಯವಿದ್ದು, ಇದನ್ನು ಭಾರತದ ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಗ್ರೂಪ್ (ಎಸ್ ಪಿ ಜಿ), ಏಷ್ಯಾದ ಭಾರತ ಅಧ್ಯಕ್ಷ ಅವಿನಾಶ್‌ ಅವುಲಾ ಬುಧವಾರ ಹೇಳಿದರು.

‘ಜಾಗತಿಕ ಹೂಡಿಕೆ ಸಮಾವೇಶ’ದಲ್ಲಿ ನಡೆದ ‘ಭವಿಷ್ಯದ ಕೌಶಲ್ಯಗಳು: ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಮತ್ತು ಸರಕಾರದ ಸಹಭಾಗಿತ್ವ” ಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಎಐ ಸೇರಿದಂತೆ ಹಲವು ತಂತ್ರಜ್ಞಾನಗಳು ನಿರೀಕ್ಷೆಗೂ ಮಿರಿ ಬೆಳೆಯುತ್ತಿದ್ದು, ಬಹುತೇಕ ತಾಂತ್ರಿಕ ಉಪಕರಣಗಳ ಅಭಿವೃದ್ಧಿಯಲ್ಲಿ ಸೆಮಿಕಂಡಕ್ಟರ್‌ ಅತ್ಯಗತ್ಯವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಈ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆ ಇದೆ. ಇದನ್ನು ಭಾರತ ಅವಕಾಶವಾಗಿ ಬಳಸಿಕೊಂಡು ಆ ಕೊರತೆ ನೀಗಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ, ಅತ್ಯಂತ ನಿರ್ಣಾಯಕ ತಂತ್ರಜ್ಞಾನದಲ್ಲಿ ದೇಶ ಮೇಲುಗೈ ಸಾಧಿಸಲಿದೆ,” ಎಂದರು.

ಯಾರ್ಕ್ ವಿಶ್ವವಿದ್ಯಾಲಯದ ಬಾಹ್ಯ ಸಂಬಂಧಗಳ ನಿರ್ದೇಶಕಿ ಜೋನ್‌ ಕಾನ್‌ ಕ್ಯಾನನ್‌ ಅವರು, “ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಓದಿನ ಹಂತದಲ್ಲಿ ಉದ್ಯಮದ ಅನುಭವ ನೀಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಪಾಲುದಾರಿಕೆ ಏರ್ಪಡಬೇಕು. ಸರಕಾರ ಇದಕ್ಕೆ ಅನುವಾಗುವಂತೆ ಸೂಕ್ತ ರೀತಿಯ ಕಾನೂನಾತ್ಮಕ ವಾತಾವರಣ ನಿರ್ಮಿಸಬೇಕು,” ಎಂದರು.

ಎಸ್ 2ಟೆಕ್ ಅಧ್ಯಕ್ಷ ಮತ್ತು ಸಿಇಒ ಡೇ ವೀರ್ಲಪತಿ, “ಭಾರತ ಪ್ರಪಂಚದಲ್ಲಿದ ಅಧ್ಯಾತ್ಮದ ತವರಾಗಿದೆ. ಎಷ್ಟೇ ತಂತ್ರಜ್ಞಾನ ಬಂದರೂ ಇಲಾನ್‌ ಮಸ್ಕ್‌ ಅವರ ಆಪ್ಟಿಮಸ್‌ ರೋಬಾಟ್‌ ಎಲ್ಲೆಡೆ ಬಳಕೆಯಾಗುತ್ತಾ ಜನರ ಎಲ್ಲಾ ಕೆಲಸಗಳನ್ನು ರೋಬಾಟ್‌ ಮಾಡುವಂತಾದರೂ ಕೊನೆಗೆ ಜನರು ಬಯಸುವುದು ಸಂತೋಷವನ್ನು. ಅಂತಹ ಸಂತೋಷ ಭಾರತದ ಅಧ್ಯಾತ್ಮದಲ್ಲಿದೆ. ಹೀಗಾಗಿ ತಂತ್ರಜ್ಞಾನದ ಜೊತೆಗೆ ಭಾರತ ಇಡೀ ಜಗತ್ತಿಗೆ ಸಂತೋಷ ಹಂಚಬಲ್ಲದು,” ಎಂದು ಅಭಿಪ್ರಾಯಪಟ್ಟರು.

ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಜೋರ್ಗ್ ಹಿಲ್ಡೆಬ್ರ್ಯಾಂಡ್‌ ಗೋಷ್ಠಿ ನಿರ್ವಹಿಸಿದರು.

Key words: Jim Invest Karnataka, employees, semiconductor, sector