ಮೈಸೂರು,ಏಪ್ರಿಲ್,1,2025 (www.justkannada.in): ವಿವಿಧ ವಿದ್ಯಾರ್ಹತೆ ಹಾಗೂ ಕೌಶಲ ಹೊಂದಿ ವಿದೇಶಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಬಯಸುವವರಿಗೆ ಇದೀಗ ಸಿಹಿಸುದ್ದಿಯೊಂದು ಸಿಕ್ಕಿದ್ದು, ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳ ಬಗ್ಗೆ ಇದೀಗ ಮೈಸೂರಿನಲ್ಲೇ ಮಾಹಿತಿ ದೊರೆಯಲಿದೆ.
ಹೌದು ಸರ್ಕಾರದಿಂದ ನೀಡುವ ಮಾಹಿತಿ ವ್ಯವಸ್ಥೆಯನ್ನು ತಿಳಿಯಲು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಹಾಗೂ ಇಲಾಖೆಯ ಅಂತರ ರಾಷ್ಟ್ರೀಯ ವಲಸೆ ಕೇಂದ್ರಕ್ಕೇ (ಐಎಂಸಿಕೆ) ಹೋಗಬೇಕಾಗಿತ್ತು.
ಆದರೆ ಇದೀಗ ಮೈಸೂರಿನಲ್ಲೇ ಮಾಹಿತಿ ಕೇಂದ್ರವನ್ನು ತೆರೆಯಲು ಸರ್ಕಾರ ಮುಂದಾಗಿದೆ. ಹುಣಸೂರು ರಸ್ತೆಯ ವಿಜಯನಗರ 3ನೇ ಹಂತದ ವಿಜಯಶ್ರೀಪುರದಲ್ಲಿರುವ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ವಿದೇಶಗಳಲ್ಲಿ ಉದ್ಯೋಗಕ್ಕೆ ಹೋಗುವವರು ಹಾಗೂ ಆ ಬಗ್ಗೆ ವಿಚಾರಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಆಯ್ಕೆಯಾದವರಿಗೆ ಆಯಾ ದೇಶದ ಭಾಷೆಯೊಂದಿಗೆ ಇಂಗ್ಲಿಷ್ ಕಲಿಕೆಯ ತರಬೇತಿಯನ್ನೂ ನೀಡಲಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಕೌಶಲ ಅಭಿವೃದ್ದಿ ಅಧಿಕಾರಿ ಕೆ.ನಾರಾಯಣಮೂರ್ತಿ, ಯಾವ ದೇಶದಲ್ಲಿ ಎಂತಹ ಹುದ್ದೆಗಳು ಖಾಲಿ ಇವೆ, ಅದಕ್ಕೆ ಬೇಕಾಗುವ ವಿದ್ಯಾರ್ಹತೆ ಮೊದಲಾದ ಮಾಹಿತಿಯನ್ನು ಒದಗಿಸಲಾಗುವುದು. ಎಲ್ಲೆಲ್ಲಿ ಹುದ್ದೆ ಖಾಲಿ ಇವೆ ಎಂಬುದನ್ನು ವಿದೇಶಾಂಗ ಇಲಾಖೆಯ ರಾಯಭಾರಿ ಕಚೇರಿಯಿಂದ ಅಧಿಕೃತವಾಗಿ ಕೊಡಲಾಗುತ್ತದೆ ಹಾಗೆಯೇ ಕೆಲಸಕ್ಕೆ ಸರ್ಕಾರದಿಂದಲೇ ಆಯ್ಕೆಯಾದವರಿಗೆ ಉಚಿತವಾಗಿ ವೀಸಾ ಒದಗಿಸಲಾಗುವುದು. ಕೌಶಲ ಅಭಿವೃದ್ಧಿ ಇಲಾಖೆ ಹಾಗೂ ವಿದೇಶಾಂಗ ವ್ಯವಹಾರ ಗಳ ಇಲಾಖೆಯ ಸಹಯೋಗದಲ್ಲಿ ಇದೆಲ್ಲವನ್ನೂ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
Key words: job opportunities, abroad, available, Information, Mysore