ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಸಮಾಲೋಚಿಸಿ ಒಮ್ಮತದ ನಿರ್ಧಾರ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,17,2024 (www.justkannada.in): ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೆ ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ನಾವು ಸುದೀರ್ಘ ಸಮಾಲೋಚನೆಗಳನ್ನು ನಡೆಸಿ ಒಮ್ಮತಕ್ಕೆ ಬರುತ್ತೇವೆ ಎಂದಿದ್ದಾರೆ.

ಈ  ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಬಳಿ ಸಮಾಲೋಚನೆ ನಡೆಸಿ ನಂತರವೇ ಅದನ್ನು ಜಾರಿಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ.  ನಾವು ಸುದೀರ್ಘ ಸಮಾಲೋಚನೆಗಳನ್ನು ನಡೆಸುತ್ತೇವೆ ಮತ್ತು ಒಮ್ಮತಕ್ಕೆ ಬರಲಿದ್ದೇವೆ. ಸ್ಥಳೀಯ ನಿವಾಸಿಗಳಿಗೆ ಉದ್ಯೋಗಗಳನ್ನು ಒದಗಿಸುವುದು ಮತ್ತು ಜತೆ ಜತೆಗೆ ಹೂಡಿಕೆಗಳನ್ನು ಆಕರ್ಷಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದರು.

ಕರ್ನಾಟಕ ಪ್ರಗತಿಪರ ರಾಜ್ಯ. ಮಸೂದೆಯ ಷರತ್ತುಗಳು ಒಂದು ಸಲಹೆಯಷ್ಟೇ. ಉದ್ಯಮ ವಲಯವು ಅದರ ಅಗತ್ಯವಿಲ್ಲ ಎಂದು ಭಾವಿಸಿದರೆ, ನಾವು ಅದನ್ನು ಗಮನಿಸುತ್ತೇವೆ. ನಾವು ಪೈ ಹಾಗೂ ಮಜುಂದಾರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: Job reservation, kannadigas, private sector, Priyank Kharge