ಪ್ಲಾಸ್ಟಿಕ್ ಮುಕ್ತ ಮೈಸೂರಿಗೆ ಕೈಜೋಡಿಸಿ: ಬಟ್ಟೆ ಬ್ಯಾಗ್ ವಿತರಿಸಿ ಪಾಲಿಕೆ ಆಯುಕ್ತರ  ಮನವಿ

ಮೈಸೂರು,ಜುಲೈ,2,2024 (www.justkannada.in): ಪ್ಲಾಸ್ಟಿಕ್ ಬ್ಯಾಕ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಿಸಿ, ಪ್ಲಾಸ್ಟಿಕ್ ಮುಕ್ತ ಮೈಸೂರಿಗೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಮನವಿ ಮಾಡಿದರು.

ನಗರದ ಚಾಮುಂಡಿಪುರಂನಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತದಿನ ಅಂಗವಾಗಿ ಮನೆ ಮನೆಗೆ ತೆರಳಿ ‘ಪ್ಲಾಸ್ಟಿಕ್ ಬ್ಯಾಕ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಿಸಿ’ ಘೋಷವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಮನೆಗಳಿಗೆ ಬಟ್ಟೆ  ಬ್ಯಾಗ್ ನೀಡುವ ಮೂಲಕ  ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಚಾಲನೆ ನೀಡಿ ಮಾತನಾಡಿದರು.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು. ಆ ಮೂಲಕ ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು , ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ರಕ್ಷಣೆ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸ್ಥಳೀಯ ಆಡಳಿತದ್ದು ಎಂಬ ಮನೋಭಾವದಿಂದ ಹೊರಬರಬೇಕು. ಸಾರ್ವಜನಿಕರು ತಮ್ಮ ಹೊಣೆ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ, ಭೂಮಿಯಲ್ಲಿ ಕೊಳೆಯದ ಇದು, ದಹಿಸಿದಾಗ ವಿಷಕಾರಕ ಅಂಶಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಇದರಿಂದ ಕ್ಯಾನ್ಸ‌ರ್  ಸೇರಿ ಹಲವು ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಸಂಕಲ್ಪ ಮಾಡಬೇಕು ಎಂದರು.

ನಂತರ ಮಾತನಾಡಿದ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್,  ಪ್ಲಾಸ್ಟಿಕ್ ಬ್ಯಾಗುಗಳು ಹಾಗೂ ವಸ್ತುಗಳನ್ನು ಬಳಸುವುದು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸಿ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲ ಬಳಸಿ ಪ್ಲಾಸ್ಟಿಕ್ ನಿಂದ ಪರಿಸರವನ್ನು ದೂರವಿಡಿ.  ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕೊಡುಗೆಯಾಗಿ ನೀಡಲು ಇಂದೇ ಶಪಥ ಮಾಡಿ ನಿಮ್ಮ ಮನೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಮಾಡಿ” ಇಂತಹ ಜಾಗೃತಿ ಕಾರ್ಯಕ್ರಮಗಳು ನಗರದಲ್ಲಿ ಹೆಚ್ಚು ಹೆಚ್ಚು ಸಂಘ ಸಂಸ್ಥೆಗಳು ಆಯೋಜಿಸಲು ಮುಂದಾಗಲಿ ಎಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಅಜಯ್ ಶಾಸ್ತ್ರಿ, ವಲಯ ಆಯುಕ್ತ ಮಂಜುನಾಥ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೀನಾಕ್ಷಿ , ಮೈಸೂರು ಮಹಾನಗರಪಾಲಿಕೆ ಪರಿಸರ ಅಭಿಯಂತ ಜ್ಯೋತಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್ ,ಕಿರಿಯ ಆರೋಗ್ಯ ನಿರೀಕ್ಷಕ ಪ್ರೀತಿ , ರೇಣುಕಾ ರಾಜ್, ವಿನಯ್ ಕಣಗಾಲ್, ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಸುಚಿಂದ್ರ, ಸಚಿನ್ ನಾಯಕ್, ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪೌರಕಾರ್ಮಿಕರು ನಗರ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Key words: Join, hands, plastic, free,  Mysore, Corporation, Commissioner