ಬೆಂಗಳೂರು, ಜನವರಿ 19, 2022 (www.justkannada.in): ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವಂತಹ ಒಂದು ಕುಟುಂಬ ಇತ್ತೀಚೆಗೆ ಪ್ರವಾಸಕ್ಕೆಂದು ಹಿಮಾಚಲ ಪ್ರದೇಶಕ್ಕೆ ತೆರಳಿತು. ಅಲ್ಲಿ ಪ್ಯಾರಾಗ್ಲೆಂಡಿಂಗ್ ಹೆಸರಿನ ಸಾಹಸ ಪ್ರವಾಸೋದ್ಯಮವೊಂದನ್ನು ಪ್ರಯತ್ನಿಸುವ ಭರದಲ್ಲಿ ಈ ಕುಟುಂಬ ಆದ್ವಿಕ್ ಎಂಬ ಹೆಸರಿನ ತನ್ನ ೧೨ ವರ್ಷ ವಯಸ್ಸಿನ ಮಗನನ್ನು ಕಳೆದುಕೊಳ್ಳಬೇಕಾಯಿತು. ಈ ಘಟನೆ ಸಾಕಷ್ಟು ಸುರಕ್ಷತಾ ಕ್ರಮಗಳ ಅನುಪಸ್ಥಿತಿಯಿಂದಾಗಿ ಘಟಿಸಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿ, ‘ಚೇಂಜ್.ಆರ್ಗ್’ ಎಂಬ ಸಾರ್ವಜನಿಕರ ಅಭಿಪ್ರಾಯವನ್ನು ಕ್ರೋಢೀಕರಿಸುವ ಅಂತರ್ಜಾಲ ತಾಣದಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡು, ಈ ರೀತಿಯ ಪ್ರಯತ್ನವನ್ನು ಮಾಡುವಾಗ ಎಲ್ಲರೂ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ. ಜೊತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಚಿವಾಲಯಕ್ಕೂ ಮನವಿ ಮಾಡಿದ್ದಾರೆ.
ಹಿನ್ನೆಲೆ
ರಿಷಬ್ ತ್ರಿಪಾಠಿ ಎನ್ನುವವರು ಬೆಂಗಳೂರಿನಲ್ಲಿ ಒಂದು ಐಟಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಇವರು ತಮ್ಮ ಕುಟುಂಬದ ಸಮೇತ ಡಿಸೆಂಬರ್ 22ರಂದು ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ಬಿರ್ ಬಿಲ್ಲಿಂಗ್ ಪ್ರದೇಶದಲ್ಲಿ ಪ್ಯಾರಾಗ್ಲೆಂಡಿಂಗ್ ನ ಆನಂದ ಸವಿಯಲು ನಿರ್ಧರಿಸಿದರು. ಹಿಮಾಚಲ ಪ್ರದೇಶದಲ್ಲಿ ಪ್ಯಾರಾಗ್ಲೆಂಡಿಂಗ್ ಬಹಳ ಜನಪ್ರಿಯ ಸಾಹಸ ಪ್ರವಾಸೋದ್ಯಮವಾಗಿದೆ. ಅಲ್ಲಿ ಅವರು ಪ್ಯಾರಾಗ್ಲೆಂಡಿಂಗ್ (ಯಂತ್ರವಿಲ್ಲದ ವಿಮಾನವನ್ನು ಹೋಲುವ ಗಾಳಿಯಲ್ಲಿ ತೇಲುವ ಸಾಧನ) ಮಾಡುವುದಕ್ಕೆ ಮುಂಚೆ, ಅಲ್ಲಿನ ಪ್ಯಾರಾಗ್ಲೆಂಡಿಂಗ್ ಆಯೋಜಕರು ಅವರಿಂದ ಒಂದು ನಮೂನೆಗೆ ಸಹಿ ಹಾಕಿಸಿಕೊಂಡು, ತಮ್ಮದೇ ವಾಹನದಲ್ಲಿ ಪ್ಯಾರಾಗ್ಲೆಂಡಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಮಾಹಿತಿ ನೀಡಿದರು. “ಆ ಸ್ಥಳಕ್ಕೆ ಹೋಗುವ ಮಾರ್ಗ ಸನಿಹದಲ್ಲೇ ಇದ್ದುದರಿಂದ ಹಿಂಭಾಗದಲ್ಲಿ ತೆರವಿದ್ದಂತಹ ವಾಹನದಲ್ಲಿ ನಾವು ಕುಳಿತುಕೊಂಡೆವು. ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಆ ವಾಹನದ ಚಾಲಕ ಬಹಳ ನಿರ್ಲಕ್ಷವಾಗಿ ವಾಹನ ಚಲಾಯಿಸುತ್ತಿದ್ದ. ಎದುರಗಡೆಯಿಂದ ಬರುತ್ತಿದ್ದಂತಹ ಒಂದು ಸ್ಕೂಟಿಗೆ ಗುದ್ದಿದ. ಅದರಿಂದ ವಾಹನದ ಮೇಲೆ ನಿಯಂತ್ರಣ ತಪ್ಪಿ ಒಂದು ಹಳಕ್ಕೆ ಬಿತ್ತು. ಆ ಘಟನೆಯಲ್ಲಿ ನನಗೆ ಮತ್ತು ನನ್ನ ಮಡದಿಗೆ ಗಂಭೀರ ಸ್ವರೂಪದ ಗಾಯಗಳಾದವು, ಆದರೆ ಅಪಾಯದಿಂದ ಬದುಕುಳಿದೆವು. ಆದರೆ ದುರಾದೃಷ್ಟವಶಾತ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದಾಗಿ ನಾವು ನಮ್ಮ ಪ್ರೀತಿಯ ಮಗ ಆದ್ವಿಕ್ ನನ್ನು ಕಳೆದುಕೊಳ್ಳಬೇಕಾಯಿತು. ಆತನಿಗೆ ಕೇವಲ ೧೨ ವರ್ಷ. ಆತ ತುಂಬಾ ಚುರುಕಾಗಿದ್ದು, ಉಜ್ವಲ ಭವಿಷ್ಯವಿತ್ತು. ಘಟನೆಯ ನಂತರ ಅಲ್ಲಿ ಚಾಲಕನಾಗಲೀ, ಪೈಲಟ್ ಗಳಾಗಲೀ ಕಾಣಲೇ ಇಲ್ಲ. ಘಟನೆ ನಡೆದ ಸ್ಥಳದಲಿ ನಮಗೆ ಪ್ಯಾರಾಗ್ಲೆಂಡಿಂಗ್ ತಂಡದ ಯಾವುದೇ ವ್ಯಕ್ತಿ ಸಹಾಯಕ್ಕೆ ಬರಲಿಲ್ಲ. ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದ ನಂತರವೂ ಸಹ ಯಾರೂ ನಮಗೆ ಸಹಾಯ ಮಾಡಲಿಲ್ಲ. ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ, ಅವುಗಳೇನೆಂದರೆ:
- ಈ ಪ್ಯಾರಾಗ್ಲೆಂಡಿಂಗ್ ಆಗಲೀ ಅಥವಾ ಈ ರೀತಿಯ ಇತರೆ ಯಾವುದೇ ಸಾಹಸ ಪ್ರವಾಸೋದ್ಯಮವಾಗಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸದೇ ಅಸಂಘಟಿತವಾಗಿ ನಡೆಸಲಾಗುತ್ತಿದೆ ಎನಿಸುತ್ತದೆ. ಇಂತಹ ಸಾಹಸೋದ್ಯಮಕ್ಕೆ ಸುರಕ್ಷತೆಯನ್ನು ಖಾತ್ರಿಪಡಿಸುವ ಯಾವುದೇ ಕೇಂದ್ರೀಯ ಸಂಸ್ಥೆಯ ಜವಾಬ್ದಾರಿಯಾಗಲೀ ಅಥವಾ ಪೂರಕ ನೀತಿಯಾಗಲಿ ಇಲ್ಲ. ಕೇವಲ ಯಾವುದೋ ಕೆಲವು ವ್ಯಕ್ತಿಗಳು ಇದನ್ನು ನಡೆಸುತ್ತಿರುವಂತಿದೆ.
- ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಯಾವುದೇ ಗಂಭೀರ ಕಾಳಜಿಯಾಗಲೀ ಪ್ರಯತ್ನವಾಗಲೀ ಕಾಣುವುದಿಲ್ಲ. ಗ್ರಾಹಕರಿಂದ ಮುಂಚಿತವಾಗಿಯೇ ಒಂದು ನಮೂನೆಗೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಇದರಿಂದ ಈ ರೀತಿಯ ಯಾವುದೇ ಅಪಾಯಕಾರಿ ಘಟನೆ ಸಂಭವಿಸಿದರೆ ಸಂಪೂರ್ಣ ಜವಾಬ್ದಾರಿ ಗ್ರಾಹಕರದ್ದೇ ಆಗಿರುತ್ತದೆ. ಆಯೋಜಕರಿಗೆ ಯಾವುದೇ ಬದ್ಧತೆ ಇಲ್ಲ.
- ಇಂತಹ ಘಟನೆಗಳು ನಡೆದರೆ ಯಾವುದೇ ರೀತಿಯ ವಿಮೆ ನೀಡುವ ವ್ಯವಸ್ಥೆಯಾಗಲೀ ಅಥವಾ ಇಂತಹ ಘಟನೆಗಳು ನಡೆಯದಿರುವಂತೆ ಯಾವುದೇ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳಾಗಲಿ ಇಲ್ಲ.
- ಇಲ್ಲಿ ಯಾವುದೇ ಆಂಬುಲೆನ್ಸ್ ಆಗಲೀ, ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯಗಳಾಗಲೀ ಇಲ್ಲ. ಮಾಹಿತಿ ನೀಡಿದರೆ ಶೀಘ್ರದಲ್ಲಿ ಸಹಾಯ ದೊರೆಯುವ ಯಾವುದೇ ವ್ಯವಸ್ಥೆಯೂ ಇಲ್ಲ.
- ಈ ಘಟನೆಯ ನಂತರ ನಾವು ಇಂತಹ ಸ್ಥಳಗಳ ಕುರಿತು ಸಂಶೋಧನೆ ನಡೆಸಿದೆವು. ಆಗ ತಿಳಿದು ಬಂದುದೇನೆಂದರೆ ಇಂತಹ ಘಟನೆಗಳು ಹಿಂದೆಯೂ ಅನೇಕ ಸ್ಥಳಗಳಲ್ಲಿ ನಡೆದಿದ್ದು ಅನೇಕ ಅಮಾಯಕರನ್ನು ಪಡೆದಿದೆ.
ಈ ಹಿನ್ನೆಲೆಯಲ್ಲಿ ಭಾರತದ ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಾನು ದೇಶದ ಮಾನ್ಯ ಪ್ರಧಾನ ಮಂತ್ರಿಗಳು, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಸಚಿವರು, ಹಿಮಾಚಲ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಹಾಗೂ ಇನ್ನಿತರರಿಗೆ ಭಾರತದಲ್ಲಿ ನಡೆಸುವ ಸಾಹಸ ಪ್ರವಾಸೋದ್ಯಮಕ್ಕೆ ಸುರಕ್ಷತೆಯನ್ನು ಖಾತ್ರಿಪಡಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ. ಈ ಸಂಬಂಧ ಈ ಆನ್ಲೈನ್ ಪೆಟಿಷನ್ ಗೆ ಸಹಿ ಹಾಕುವಂತೆ ಹಾಗೂ ಆ ಮೂಲಕ ನನ್ನ ಮನವಿಗೆ ಶಕ್ತಿ ತುಂಬುವಂತೆ ಓದುಗರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಈ ಕೆಳಕಂಡ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡುತ್ತಿದ್ದೇನೆ:
೧. ಪ್ಯಾರಾಗ್ಲೆಂಡಿಂಗ್ , ರೋಪ್ವೇ, ಜಲಕ್ರೀಡೆಗಳು, ರಿವರ್ ರ್ಯಾಫ್ಟಿಂಗ್, ಅಥವಾ ಈ ರೀತಿಯ ಇನ್ನಿತರೆ ಯಾವುದೇ ರೀತಿಯ ಸಾಹಸ ಪ್ರವಾಸೋದ್ಯಮ ಕ್ರೀಡೆಗಳು ನಡೆಯುವ ಸ್ಥಳಗಳಲ್ಲಿ ಲಭ್ಯವಿರುವ ಸುರಕ್ಷಾ ಸೌಲಭ್ಯಗಳನ್ನು ಸುಧಾರಿಸಬೇಕು ಮತ್ತು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಬೇಕು
೨. ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರಗಳ ಮೇಲ್ವಿಚಾರಣೆಯಡಿ ಸಾಹಸ ಪ್ರವಾಸೋದ್ಯಮದ ನಿರ್ವಾಹಕರಿಂದ ಖಾಯಂ ಅಪಘಾತ ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಗಳನ್ನು ಏರ್ಪಡಿಸುವುದು. ಗ್ರಾಹಕರಿಗೆ ವಿಮಾ ಸೌಲಭ್ಯವನ್ನು ಕಡ್ಡಾಯಪಡಿಸುವುದು.
೩. ವೃತ್ತಿಪರ ಹಾಗೂ ಸುರಕ್ಷಿತ ಸಾಹಸ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು. ಈ ರೀತಿ ಅಪಘಾತಗಳು ಸಂಭವಿಸಿದಾಗ ನಿಖರವಾಗಿ ಯಾವ ಕ್ರಮಗಳನ್ನು ಪಾಲಿಸಬೇಕು ಎಂಬ ಕುರಿತು ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸುವುದು
೪. ಇಂತಹ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಅಥವಾ ವ್ಯಕ್ತಿಗಳಲ್ಲಿ ವೈಯಕ್ತಿಕ ಹೊಣೆಗಾರಿಕೆ, ಏಜೆಂಟರು ಹಾಗೂ ಉಪಕರಣಗಳ ಗುಣಮಟ್ಟ ಪರಿಶೀಲನೆಯನ್ನು ಖಾತ್ರಿಪಡಿಸುವುದು. ಇಂತಹ ಸಂಸ್ಥೆಗಳ ಕ್ರಮಬದ್ಧ ನಿಗಾವಣೆ ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಸಂಬಂಧಪಟ್ಟ ಸಂಸ್ಥೆಯ ಪರವಾನಗಿಯನ್ನು ರದ್ದುಪಡಿಸುವುದು ಇಂತಹ ಕ್ರಮಗಳು ಬಹಳ ಅಗತ್ಯ.
ಈಗ ನಾವು ಏನೇ ಮಾಡಿದರೂ ನಮಗೆ ನಮ್ಮ ಮಗ ಆದ್ವಿಕ್ ದೊರೆಯುವುದಿಲ್ಲ ಎನ್ನುವುದು ನಮಗೆ ತಿಳಿದಿದೆ. ನಮಗೆ ತುಂಬಲಾರದ ನಷ್ಟವುಂಟಾಗಿದೆ. ಆದರೆ ಈ ಮೂಲಕ ಮತೋರ್ವ ಆದ್ವಿಕ್ ನ ಪ್ರಾಣ ಹೋಗದಿರಲಿ ಎನ್ನುವುದೇ ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಈ ಪೆಟಿಷನ್ ಬಹಳ ಮೌಲ್ಯವುಳ್ಳದ್ದಾಗಿದೆ. ಆದ್ದರಿಂದ, ಪ್ರಾಧಿಕಾರಗಳನ್ನು ಎಚ್ಚರಗೊಳಿಸಲು ಹಾಗೂ ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಠಿಣ ನಿಯಮಗಳನ್ನು ರೂಪಿಸುವುದನ್ನು ಖಾತ್ರಿಪಡಿಸಲು ತಾವು ನಮ್ಮೊಂದಿಗೆ ಕೈಜೋಡಿಸುವ ಸಲುವಾಗಿ ಈ ಪೆಟಿಷನ್ ಗೆ ಸಹಿ ಹಾಕುವಂತೆ ಮನವಿ ಮಾಡುತ್ತಿದ್ದೇನೆ. ಭಾರತದಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸುರಕ್ಷಿತ ಹಾಗೂ ಹೆಚ್ಚು ಬದ್ಧತೆಯುಳ್ಳ ಸುರಕ್ಷತಾ ನಿಯಮಗಳನ್ನು ಪಡೆಯಲು ನಮಗೆ ಹಕ್ಕಿದೆ. ಪ್ರತಿಯೊಂದು ಜೀವವೂ ಅಮೂಲ್ಯ!
Ensuring safe Adventure Tourism in India – ಈ ಪಿಟಿಷನ್ ಗೆ ಸಹಿ ಮಾಡಿ ಅಭಿಯಾನಕ್ಕೆ ನೆರವಾಗಿ ..
Key words: Join us – ensure- safe-adventure -tourism – India.