ಬೆಂಗಳೂರು,ಮೇ,10,2024 (www.justkannada.in): ಚಿಕ್ಕಮಗಳೂರಿನ ಯುವ ಪತ್ರಕರ್ತ ವಿಜಯಕುಮಾರ್ ಎಸ್.ಕೆ. ಅವರಿಗೆ ಈ ಬಾರಿ ರೋಹಿತ್ ರಾಜಣ್ಣ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ವಿಜಯಕುಮಾರ್ ಮೂಲತಃ ಹಾಸನ ಜಿಲ್ಲೆಯವರು. ಬಡತನದಲ್ಲಿ ಹುಟ್ಟಿ ಬೆಳೆದರೂ ಪತ್ರಿಕೋದ್ಯಮದಲ್ಲಿ ನಿಷ್ಠೆ ಮತ್ತು ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳು, ಪುಟ್ಟ ಸಂಸಾರ. ದುಡಿಮೆಯನ್ನೇ ನಂಬಿ ಬದುಕಿದವರು. ಚಿಕ್ಕಮಗಳೂರು ಪ್ರಜಾವಾಣಿ ವರದಿಗಾರರು.
ಇದಕ್ಕೆ ಮುನ್ನ ಪತ್ರಿಕೆ ಹಂಚಿಕೆ ಕೆಲಸದ ಮೂಲಕ ಹಾಸನದ ಜ್ಞಾನದೀಪ, ಹಾಸನಮಿತ್ರ, ಜನಮಿತ್ರದಲ್ಲಿ ಕೆಲಸ ಆರಂಭವಾಗಿ ಪತ್ರಕರ್ತನ ವೃತ್ತಿವರೆಗೆ. 2012ರಲ್ಲಿ ವಿಜಯವಾಣಿ ಪತ್ರಿಕೆಗೆ ಸೇರ್ಪಡೆಯಾದರು. ಅಲ್ಲಿಂದ ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿಗೆ ಸೇರ್ಪಡೆಯಾದರು. ಹಾಸನ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ ಅನುಭವ ವಿಜಯಕುಮಾರ್ ಅವರಿಗಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಅದರಿಂದ ಕೆಲವರ ಅವಕೃಪೆಗೆ ಒಳಗಾಗಿದ್ದುಂಟು. ಆದರೂ ಧೃತಿಗೆಡದ ಮನಸ್ಸು. ‘ಬೂದಿಯಾಗದ ಕೆಂಡ’ ಇವರು ಬರೆದ ಕೃತಿ 2015ರಲ್ಲಿ ಪ್ರಕಟವಾಗಿದೆ. ಇದರಲ್ಲಿರುವ ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಎಂಬ ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ ನಾಲ್ಕನೇ ಸೆಮಿಸ್ಟರ್ ಗೆ ಪಠ್ಯವಾಗಿದೆ.
ಇನ್ನೂ 44 ವಸಂತಗಳನ್ನು ಕಂಡಿರುವ ವಿಜಯಕುಮಾರ್ ಪತ್ರಿಕೋದ್ಯಮದಲ್ಲಿ ದಾಪುಗಾಲು ಹಾಕುವ ಹುಮ್ಮಸ್ಸಿನಲ್ಲಿದ್ದಾರೆ. ಇವರ ವೃತ್ತಿಪರತೆಯನ್ನು ಕಂಡು ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ ರೋಹಿತ್ ರಾಜಣ್ಣ ಅವರ ಹೆಸರಿನಲ್ಲಿ ಕೊಡಮಾಡುತ್ತಿರುವ ಪ್ರಶಸ್ತಿಯನ್ನು ಇವರಿಗೆ ನೀಡಲು ತೀರ್ಮಾನಿಸಿದೆ. ಕಳೆದ ವರ್ಷ ಇದೇ ಪ್ರಶಸ್ತಿಯನ್ನು ಜಗನ್ನಾಥ ಕಾಳೇನಹಳ್ಳಿ ಅವರಿಗೆ ನೀಡಲಾಗಿತ್ತು.
ರೋಹಿತ್ ರಾಜಣ್ಣ ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಜಯ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಗಾರರಾಗಿ ಅತ್ಯಂತ ಜನಪ್ರಿಯರಾಗಿದ್ದರು. ಅವರು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಅವರ ತಂದೆ ರಾಜಣ್ಣ ಪ್ರತಿವರ್ಷ ತಮ್ಮ ಪುತ್ರನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದಾರೆ. ಅವರ ಶ್ರಮಕ್ಕೆ ಐಎಂಎಸ್ಆರ್ ಕೈಜೋಡಿಸುವ ಕೆಲಸ ಕೈಗೊಂಡಿದೆ.
ಐಎಂಎಸ್ಆರ್ ಸಂಸ್ಥೆಯನ್ನು ಪತ್ರಕರ್ತರು ಮತ್ತು ಪತ್ರಿಕಾ ಶಿಕ್ಷಣ ಕ್ಷೇತ್ರದ ತಜ್ಞರು ಸ್ಥಾಪಿಸಿದ್ದು, ಯುವ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಮತ್ತು ಉತ್ತೇಜನ ನೀಡುವ ಕಾರ್ಯಕೈಗೊಂಡಿದೆ.
Key words: journalist, Vijayakumar, Rohit Rajanna Media Award