ಬೆಂಗಳೂರು, ಅಕ್ಟೋಬರ್ ,3,2020(www.justkannada.in): ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ, ಸುರಕ್ಷತಾ ಕ್ರಮಗಳನ್ನು ಹೊಂದುವುದು ಅತ್ಯಗತ್ಯವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಸರ್ಕಾರದಿಂದ ಕಲ್ಪಿಸಲಾಗಿರುವ ಆರೋಗ್ಯ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ತಿಳಿಸಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆಯಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲು ರಾಜ್ಯದ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಾರ್ತಾ ಇಲಾಖೆ ಕಚೇರಿ ವತಿಯಿಂದ ಜಿಲ್ಲೆಯಲ್ಲಿ ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಗೆ ಮುದ್ರಿಸಲಾದ ಆರೋಗ್ಯ ಕಾರ್ಡ್ ಅನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು, ಮಾಧ್ಯಮ ಮಾನ್ಯತೆ ಪಡೆದ ಜಿಲ್ಲಾ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.
ಬಳಿಕ ಮಾತನಾಡಿದ ಡಾ.ಪಿ.ಎಸ್.ಹರ್ಷ, ಆರೋಗ್ಯ ಚಿಕಿತ್ಸೆಗಾಗಿ ಒಂದು ಕುಟುಂಬವು ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿಗಳ ನೆರವು ಪಡೆಯುತ್ತದೆ. ರಾಜ್ಯದ ಎಲ್ಲಾ ಅರ್ಹ ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ ಅನ್ನು ವಿತರಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಚೇರಿಯ ಅಧಿಕಾರಿಗಳಿಗೆ, ಸೂಚಿಸಲಾಗಿದೆ. ಅದರಂತೆ ಎಲ್ಲಾ ಅಧಿಕಾರಿಗಳು, ಕ್ರಮವಹಿಸಿದ್ದು, ಮಾನ್ಯತಾ ಕಾರ್ಡ್ ಹೊಂದಿರುವ, ಬಹುತೇಕ ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಇದಲ್ಲದೆ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ನಿವೃತ್ತಿ ಹೊಂದಿರುವ ಅರ್ಹ ಪತ್ರಕರ್ತರಿಗೆ ಮಾಸಾಶನ ಸೌಲಭ್ಯ ಒದಗಿಸಲಾಗುತ್ತಿದ್ದು, ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕೆಂದು ಮಾಹಿತಿ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಾದ ಕೆ.ಪಿ.ಪುಟ್ಟಸ್ವಾಮಯ್ಯ, ಎನ್.ಎಸ್.ಮಹೇಶ್, ಹೇಮಾವತಿ.ಜೆ, ಪತ್ರಕರ್ತರಾದ ಪ್ರಸನ್ನಕುಮಾರ್ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
Key words: Journalists -Health Card- Facilitation – Department of Information and Public Relations- Commissioner –P. Harsha