ಮೈಸೂರು, ಜ.೧೦,೨೦೨೫: (www.justkannada.in news) ವೈದ್ಯರು ಕರುಣೆ, ಮಮತೆಯಿಂದ ರೋಗಿಗಳ ಆರೋಗ್ಯ ವಿಚಾರಿಸಿದರೆ ಅವರಿಗೆ ಶೇ. ೫೦ ರಷ್ಟು ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪ್ರತಿಪಾದಿಸಿದರು.
ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದರು.
‘‘ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ದೊಡ್ಡ ದೊಡ್ಡ ಕನಸು ಕಾಣಬೇಕು. ನಿಮ್ಮ ಬಳಿಗೆ ವೃದ್ಧರು, ವಿಕಲಚೇತನರು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಸೇರಿದಂತೆ ಅನೇಕರು ಆರೋಗ್ಯ ಸಮಸ್ಯೆಯಿಂದ ಬರಬಹುದು. ಆಗ ಅವರಿಗೆ ಕರುಣೆ, ಮಮತೆಯಿಂದ ಯೋಗಕ್ಷೇಮ ವಿಚಾರಿಸಿದರೆ ಶೇ. 50ರಷ್ಟು ಅವರ ರೋಗ ಸಮಸ್ಯೆ ನಿವಾರಣೆಯಾಗುತ್ತದೆ,’’ ಎಂದರು.
ಈ ದೇಶದ ಸಂವಿಧಾನ ಎಲ್ಲಾ ನಾಗರಿಕರಿಗೂ ನ್ಯಾಯ, ಸಮಾನತೆ ನೀಡಿದೆ. ಉನ್ನತ ಶಿಕ್ಷಣ ಪಡೆದವರು ಈ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಜಗತ್ತನ್ನು ಬದಲಿಸುವ ಶಕ್ತಿಶಾಲಿ ಅಸ್ತ್ರವೆಂದರು ಅದು ಶಿಕ್ಷಣ ಎಂದು ನೆಲ್ಸನ್ ಮಂಡೇಲಾ ಪ್ರತಿಪಾಧಿಸಿದ್ದರು ಎಂದು ಅಭಿಪ್ರಾಯಪಟ್ಟರು.
ಇಂದು ಎಲ್ಲರಿಗೂ ಅವಕಾಶ ಸಿಗಬೇಕು. ಹೀಗಾಗಿ ಅಂಗವಿಕಲತೆ ಕಾರಣ ವೈದ್ಯಕೀಯ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗೆ ಮರುಪರೀಕ್ಷೆ ಬರೆಯುವ ಅವಕಾಶವನ್ನು ಸುಪ್ರೀಂ ಕೋರ್ಟ್ ಒದಗಿಸಿತ್ತು. ಕೋವಿಡ್ ಸಮಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ದೇಶದ ಎಲ್ಲರಿಗೂ ಲಸಿಕೆ ಉಚಿತವಾಗಿ ಸಿಗುವಂತೆ ಮಾಡಿತ್ತು ಎಂದರು.
ಇಂದು ಜಾಗತಿಕ ಸವಾಲುಗಳು ಸಾಕಷ್ಟಿವೆ. ಉಕ್ರೇನ್, ಗಾಜಾ, ಆಫ್ರಿಕಾದಲ್ಲಿ ಯುದ್ಧಗಳು ನಡೆಯುತ್ತಿವೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಯುದ್ಧದಲ್ಲಿ ಜೀವ ಲೆಕ್ಕಿಸದೇ ಆರೈಕೆ ಮಾಡಿದ ್ಲಾರೆನ್ಸ್ ನೈಟಿಂಗೇಲ್ ಆದರ್ಶವಾಗಬೇಕು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ಸಮಾರಂಭದ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಸಮ ಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ.ಎಚ್. ಬಸವನಗೌಡಪ್ಪ, ಕುಲಸಚಿವ ಡಾ.ಬಿ. ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್. ಸುಧೀಂದ್ರ ಭಟ್ ಹಾಜರಿದ್ದರು.
2,795 ಮಂದಿಗೆ ಪ್ರಮಾಣ ಪತ್ರ :
ಪದವಿ ಮತ್ತು ಡಿಪ್ಲೊಮಾ ಸೇರಿ ಒಟ್ಟು 2,795 ಮಂದಿಗೆ ಪ್ರಮಾಣ ಪತ್ರ ನೀಡಲಾಯಿತು. ಒಬ್ಬರಿಗೆ ಪಿಎಚ್.ಡಿ ಮತ್ತು ಡಿ.ಲಿಟ್ ಪದವಿ ಪ್ರದಾನ ಮಾಡಿದರೆ, 104 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಲಾಯಿತು. ಒಟ್ಟಾರೆ 56 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 75 ಪದಕ ಪ್ರದಾನ ಮಾಡಲಾಯಿತು.
key words: JSS, Medical college, convocation, Former C.J.of India, DY Chandrachud
SUMMARY:
If doctors are compassionate, 50 per cent of patients’ problems will be reduced: Former Chief Justice of India DY Chandrachud said in mysore JSS medical college convocation function