ಮೈಸೂರು,ಅಕ್ಟೋಬರ್,6,2022(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ನಿನ್ನೆ ನಡೆದಿದ್ದು ದೇವರ ದಯೆಯಿಂದ ಯಶಸ್ವಿಯಾಗಿದೆ. ನಾಳೆ ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮ ಇರಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ಯಶಸ್ವಿ ಜಂಬೂಸವಾರಿ ಬಳಿಕ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಫ್ ಕರಿಕಾಳನ್, ಜಂಬೂ ಸವಾರಿ ಯಶಸ್ಸಿಗೆ ಕಾರಣ ನಮ್ಮ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಹಾಗೂ ಮಾವುತರು. ಸುಮಾರು 59 ದಿನಗಳ ಕಾಲ ಆನೆಗಳಿಗೆ ಉತ್ತಮ ತರಬೇತಿ, ತಾಲೀಮು ಕೊಟ್ಟು ಈ ಬಾರಿಯ ಜಂಬೂಸವಾರಿಯನ್ನ ಯಶಸ್ವಿಗೊಳಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದಿಂದ ಎಲ್ಲಾ ಒಳ್ಳೆಯದಾಗಿದೆ ಎಂದರು.
ನಾಳೆ ಗಜಪಡೆಯ ಬೀಳ್ಕೊಡುಗೆ ಇದೆ. ಎರಡು ತಿಂಗಳಿಂದ ಅರಮನೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳನ್ನ ಸ್ವ ಸ್ಥಳಕ್ಕೆ ಕಳಿಸಿಕೊಡಲಾಗುತ್ತದೆ. ನಾಳೆ ಸಾಂಪ್ರದಾಯಿಕ ಪೂಜೆ ಮಾಡಿ ಬಳಿಕ ಕಳಿಸಿಕೊಡಲಾಗುತ್ತದೆ. ಅರಮನೆಗೆ ಬಂದು ಗಂಡು ಮಗು ಮರಿಗೆ ಜನ್ಮ ನೀಡಿದ್ದ ಲಕ್ಷ್ಮಿ ಮತ್ತು ಮರಿಯಾನೆಯನ್ನು ನಾಳೆ ಬೀಳ್ಕೊಡಲು ನಿರ್ಧರಿಸಲಾಗಿದೆ. ವೈದ್ಯರು ಮತ್ತು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಳಿಸುವ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
Key words: jumbo savari – success-Tomorrow-Gajapade.