ಕೊಪ್ಪಳ ಮಾರ್ಚ್, 9,2025 (www.justkannada.in): ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ ನಲ್ಲಿ ಅಲ್ಲ. ಬಾಲ ಭವನ ನಿಮ್ಮೊಳಗಿನ ಪ್ರತಿಭೆ ಹೊರಗೆ ತರುವ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಗೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಬಾಲಭವನ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಗುವಿಗೆ ಊಟ ಮಾಡಿಸುವಾಗಲೂ ತಾಯಂದಿರು ಮೊಬೈಲ್ ನಲ್ಲಿ ತೋರಿಸುವುದರಿಂದ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಮೊಬೈಲ್ ಗೆ ಅಂಟಿ ಕೊಳ್ಳುತ್ತಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.
ಮಕ್ಕಳು ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತಾಗ ಅವರಲ್ಲಿ ಸೃಜನಶೀಲತೆ ಅರಳುತ್ತದೆ. ಸ್ವಂತಕ್ಕೆ ಆಟದ ಸಾಮಾನುಗಳನ್ನು ಸೃಷ್ಟಿಸಿಕೊಳ್ಳುವುದು ಮಕ್ಕಳ ಮೊದಲ ಸೃಜನಶೀಲ ಕ್ರಿಯೆ. ಮನೆಯಿಂದ ಹೊರಗೆ ಮಕ್ಕಳು ಆಟಕ್ಕೆ ಇಳಿದಾಗ ಕೈಗೆ ಸಿಕ್ಕ ಸಾಮಾಗ್ರಿಗಳೇ ಅವರ ಆಟದ ವಸ್ತುಗಳಾಗುತ್ತವೆ. ಕೇವಲ ನಾಲ್ಕು ಗೋಡೆ ಮಧ್ಯೆ ಕುಳ್ಳಿರಿಸಿ ಪ್ಲಾಸ್ಟಿಕ್ ಆಟದ ವಸ್ತುಗಳು, ಮೊಬೈಲ್ ಗಳ ಗೀಳು ಹಚ್ಚಿಕೊಳ್ಳುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ನಾವೆಲ್ಲಾ ಆಡುವಾಗ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಾಗಲಿ, ಮೊಬೈಲ್ ಗಳ ಚಾಳಿಯಾಗಲಿ ಇರಲಿಲ್ಲ. ಹೀಗಾಗಿ ನಮಗೆ ಪುಸ್ತಕಗಳು, ಮಣ್ಣಿನ ವಸ್ತುಗಳು ಹೆಚ್ಚು ಹತ್ತಿರವಾದವು. ಕೆಳಗೆ ಕುಳಿತಿರುವ ನೀವುಗಳು ಮುಂದಿನ ದಿನಗಳಲ್ಲಿ ಇಲ್ಲಿ ಮೇಲೆ ಕೂರುವಂತಾಗಬೇಕು ಎಂದರೆ ಪುಸ್ತಕಗಳ ಒಡನಾಟ ಮುಖ್ಯ. ಇರದಿಂದ ಓದು, ಬರಹದ ಜೊತೆಗೆ ಗ್ರಹಿಕೆಯೂ ಉತ್ತಮಗೊಳ್ಳುತ್ತದೆ, ಜೊತೆಗೆ ಗ್ರಹಿಕೆಯೂ ವೃದ್ಧಿಯಾಗುತ್ತದೆ ಎಂದರು.
ಮಕ್ಕಳಿಗೆ ಪೋಷಕರೇ ಪ್ರಥಮ ಗುರು. ಆದ್ದರಿಂದ ಮಕ್ಕಳು ಪೋಷಕರ ಮಾತನ್ನು ಕೇಳಿಸಿಕೊಳ್ಳಬೇಕು. ಮಕ್ಕಳು ದೊಡ್ಡವರಾದ ಮೇಲೆ ಪೋಷಕರನ್ನು ಅಷ್ಟೇ ಜವಾಬ್ದಾರಿಯಿಂದ, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು.
ಆಟೋಚಾಲಕರ ಮಕ್ಕಳು, ಪಂಕ್ಚರ್ ಅಂಗಡಿಯವರ ಮಕ್ಕಳೆಲ್ಲಾ ಈಗ ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯುತ್ತಿದ್ದಾರೆ. ತಂದೆ ತಾಯಿಗೆ ಇದಕ್ಕಿಂತ ಖುಷಿಯ ಸಂಗತಿ ಬೇರೆ ಇಲ್ಲ. ಆದ್ದರಿಂದ ಮಕ್ಕಳು ಪೋಷಕರ ಶ್ರಮ, ಪ್ರೀತಿ, ಕಾಳಜಿಯನ್ನು ನೆನಪಿಟ್ಟುಕೊಳ್ಳಬೇಕು ಎಂದು ಕರೆ ನೀಡಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಕೆ.ವಿ.ಪ್ರಭಾಕರ್ ಹಾರೈಸಿದರು.
Key words: Children, creativity, soil, not, mobile phones, K.V. Prabhakar