ಮೈಸೂರು,ಆ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತು ಪ್ರವಾಹದಿಂದ ಜನ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಅಣೆಕಟ್ಟೆಗಳಿಗೆ ಬಾಗಿನ ಅರ್ಪಿಸುವ ಔಚಿತ್ಯವೇನಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದ್ದಾರೆ.
ರಾಜ್ಯ ಸಂಕಷ್ಟದಲ್ಲಿದ್ದರೂ ಕೆ.ಆರ್ ಎಸ್ ಮತ್ತು ಕಬಿನಿ ಅಣೆಕಟ್ಟೆಗಳಿಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ ಪಕ್ಷದ ವತಿಯಿಂದ ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಬಿನಿ ಹಾಗೂ ಕೆಆರ್ಎಸ್ ಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸುವ ಸಮಯದಲ್ಲಿ ರೈತ ಸಂಘದ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಕೊರೋನಾ ಪರಿಸ್ಥಿತಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮತ್ತೊಂದು ಕಡೆ ರಾಜ್ಯ ಪ್ರವಾಹದಲ್ಲಿ ಮುಳುಗಿದೆ. ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸರ್ಕಾರ ಸ್ಪಂದಿಸಿಲ್ಲ. ಇಂತಹ ಸಂದರ್ಭದಲ್ಲಿ ಅಣೆಕಟ್ಟೆಗಳಿಗೆ ಬಾಗಿನ ಅರ್ಪಿಸುವ ಔಚಿತ್ಯವೇನಿದೆ. ಇದು ಸೂತಕದ ಮನೆಯಲ್ಲಿ ಸಂಭ್ರಮಾಚರಿಸಿದಂತೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳಿಗೆ ಸೂಕ್ಷ್ಮ ಪ್ರಜ್ಞೆ ಇದ್ದರೆ ಇಂತಹ ನಿಲುವನ್ನು ಕೈಬಿಡಬೇಕು. ಮೊದಲು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು..
ಮಂಡ್ಯ ಜಿಲ್ಲೆಯ ಕೆ.ಆರ್. ಎಸ್ ಅಣೆಕಟ್ಟೆಯ ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆ ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ಕಳೆದ ವರ್ಷ ಗಣಿಗಾರಿಕೆ ತಡೆಗಟ್ಟಲಾಗುವುದು ಎಂದು ಹೇಳಿದ್ದರೂ ಒಂದು ವರ್ಷ ಕಳೆದರೂ ಇನ್ನೂ ತಡೆಗಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ನೂತನ ಭೂ ಸುಧಾರಣೆ ಕಾಯ್ದೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗಿದೆ. ಇದು ರೈತರ ಜಮೀನನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡುತ್ತಿದೆ. ಇದರ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರಾರಂಭ ಮಾಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
Key words: Kabini- KRS- cm bs yeddyurappa- Black flag- display- Badagalapura nagendra