ಆನ್ ಲೈನ್ ಗೆ ಲಗ್ಗೆ ಇಟ್ಟ “ಕಲಬುರ್ಗಿ ರೊಟ್ಟಿ”

ಕಲಬುರಗಿ,ಅಕ್ಟೋಬರ್,26,2024 (www.justkannada.in):  ಕಲ್ಯಾಣ ಕರ್ನಾಟಕದ ಪ್ರಮುಖ ಆಹಾರವಾದ ರೊಟ್ಟಿ ಈಗ ಆನ್ ಲೈನ್ ಗೂ ಲಗ್ಗೆ ಇಟ್ಟಿದ್ದು ಕಲ್ಬುರ್ಗಿ ರೊಟ್ಟಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

‘ಕಲಬುರಗಿ ರೊಟ್ಟಿ’ ಬ್ರಾಂಡ್ ಮಾಡುವ ಮೂಲಕ ಜಿಲ್ಲೆಯಲ್ಲಿ ತಯಾರಾಗುವ ರೊಟ್ಟಿಯನ್ನು ದೇಶದ ಪ್ರಮುಖ ನಗರಗಳಿಗೆ ಕಳುಹಿಸಿಕೊಡುವ ಯತ್ನಕ್ಕೆ ಸ್ಪಂದನೆ ದೊರೆಯುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಮಾಲ್ಕಂಡಿ ತಳಿಯ ಉತ್ಕೃಷ್ಟ ಗುಣಮಟ್ಟದ ಬಿಳಿಜೋಳದಿಂದ ರೊಟ್ಟಿ ತಯಾರಿಸಿ ರಫ್ತು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ರೊಟ್ಟಿ ತಯಾರಿಕರಿಗೆ 100 ಯಂತ್ರಗಳನ್ನು ನೀಡಿದ್ದು, ಪ್ರತಿನಿತ್ಯ ಸಾವಿರಾರು ರೊಟ್ಟಿಗಳು ಬೆಂಗಳೂರಿನ ವಿವಿಧ ಹೋಟೆಲ್‌ ಗಳಿಗೆ ಹೋಗುತ್ತಿವೆ.

ರೊಟ್ಟಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲು ಜಿಲ್ಲಾಡಳಿತವು ಆನ್‌ ಲೈನ್ ಮಾರಾಟ ತಾಣಗಳಾದ ಅಮೆಜಾನ್, ಪ್ಲಿಪ್‌ ಕಾರ್ಟ್‌ನೊಂದಿಗೆ ಸಂಪರ್ಕ ಸಾಧಿಸುವ ಯತ್ನ ನಡೆಸಿದ್ದು, ಕೆಲವೇ ದಿನಗಳಲ್ಲಿ ಆನ್‌ಲೈನ್ ಮೂಲಕವೂ ರೊಟ್ಟಿ ಖರೀದಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಸಕ್ಷಮ ಪ್ರಾಧಿಕಾರಗಳಿಂದ ರೊಟ್ಟಿಗೆ ಗುಣಮಟ್ಟ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಅಗತ್ಯವಿರುವ ನೋಂದಣಿಯನ್ನೂ ಮಾಡಿಸಲಾಗುತ್ತಿದೆ. ಕಲಬುರಗಿ ರೊಟ್ಟಿ ವೆಬ್‌ ಸೈಟ್ ಗಮನಿಸಿ ನ್ಯೂಜಿಲೆಂಡ್‌ನಿಂದಲೂ ಮಾಹಿತಿ ಪಡೆದಿದ್ದಾರೆ ಎಂದು ಕಲಬುರಗಿ ಬಿ.ಫೌಜಿಯಾ ಬಿ. ಫೌಜಿಯಾ ತರನ್ನುಮ್ ಹೇಳಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ರೊಟ್ಟಿಯನ್ನು ಆರ್ಡರ್ ಮಾಡಬಹುದಾಗಿದ್ದು, ಜಿಲ್ಲೆಯಲ್ಲಿ ಆರಂಭವಾಗಿರುವ ರೊಟ್ಟಿ ಉತ್ಪಾದಕರ ಸಂಘದಿಂದ ಜೋಳ, ಸಜ್ಜೆ ರೊಟ್ಟಿ ಹಾಗೂ ದಪಾಟಿಗಳನ್ನು ಖರೀದಿಸುವ ಕುರಿತಂತೆ ಕಲಬುರಗಿಯ ಹೋಟೆಲ್ ಮಾಲೀಕರ ಸಂಘ, ಸಪ್ತಗಿರಿ ಫುಡ್ ಪ್ರೊಡಕ್ಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕಳೆದ ಮಾರ್ಚ್ 13ರಂದು ನಗರದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಕಲಬುರಗಿ ರೊಟ್ಟಿ’ಯನ್ನು ಬಿಡುಗಡೆ ಮಾಡಿದ್ದರು.

Key words: Kalaburgi Roti,  launched, online, DC