ಬೆಂಗಳೂರು,ಜೂನ್,24,2021(www.justkannada.in): ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಸಂಗೀತ ಕಲಾವಿದರ ನೆರವಿಗಾಗಿ ರೂಪಿಸಲಾಗಿರುವ ʼಕಲಾನಿಧಿ- 2021ʼ ಸಂಗೀತ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಎಲ್ಲರೂ ವೀಕ್ಷಿಸಿ ಉದಾರವಾಗಿ ದೇಣಿಗೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪಿತವಾಗಿದೆ. ಶುಕ್ರವಾರ ಮತ್ತು ಶನಿವಾರ ಸಂಜೆ 7ರಿಂದ 10 ಗಂಟೆವರೆಗೆ ಹಾಗೂ ಭಾನುವಾರ 4ರಿಂದ 10 ಗಂಟೆ ತನಕ ಕಾರ್ಯಕ್ರಮ ಪ್ರಸಾರ ಆಗಲಿದೆ ಎಂದರು.
ಯುಟ್ಯೂಬ್ ಸೇರಿ ನಮ್ಮ ಮೂವರ ಜಾಲತಾಣಗಳ ಖಾತೆಗಳಲ್ಲಿ ಕಲಾನಿಧಿ ಕಾರ್ಯಕ್ರಮ ಪ್ರಸಾರವಾಗಲಿದೆ. ಜಾಗತಿಕ ಮಟ್ಟದ ಪ್ರಸಿದ್ಧ ಗಳಿಸಿರುವ ಗಾಯಕರಾದ ವಿಜಯ ಪ್ರಕಾಶ್, ಸೋನು ನಿಗಮ್ ಸೇರಿದಂತೆ ನೂರಕ್ಕೂ ಹೆಚ್ಚು ಖ್ಯಾತ ಕಲಾವಿದರು, ಅನೇಕ ಉದಯೋನ್ಮುಖ ಸಂಗೀತಗಾರರು ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಪ್ರತಿಯೊಬ್ಬರೂ ವೀಕ್ಷಿಸಿ ಕಲಾವಿದರ ಕಷ್ಟಕ್ಕೆ ಮಿಡಿಯಬೇಕು. ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವಾಗಲೇ ತೆರೆಯ ಮೇಲೆ ಯಾವ ಖಾತೆಗೆ ಹಣ ವರ್ಗಾಯಿಸಬೇಕು ಎಂಬ ಮಾಹಿತಿಯೂ ಕಾಣಿಸಿಕೊಳ್ಳುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕೋರಿದರು.
ಇದೊಂದು ಅಪರೂಪದ ಕಾರ್ಯಕ್ರಮ. ಸಂಕಷ್ಟದ ಒತ್ತಡ ಕಾಲದಲ್ಲಿ ಸಂಗೀತ ಔಷಧದಂತೆ ಕೆಲಸ ಮಾಡುತ್ತದೆ. ಸಂಗೀತ ಆಲಿಸುವುದರಿಂದ ನಮ್ಮ ಮಿದುಳಿನ ಎಲ್ಲ ಭಾಗಗಳು ಚುರುಕಾಗಿ ಕೆಲಸ ಮಾಡುತ್ತವೆ. ಇದು ವೈಜ್ಞಾನಿಕವಾಗಿ ಸಾಭೀತಾಗಿರುವ ಅಂಶ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಬ್ಯಾಂಕ್ ಖಾತೆಗೆ ಹಣ:
ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕೈಗೆ ನಗದು ಕೊಡುವ ವ್ಯವಹಾರವೇ ಇರುವುದಿಲ್ಲ. ಹೀಗಾಗಿ ಕಲಾನಿಧಿ ಕಾರ್ಯಕ್ರಮದ ಎಲ್ಲ ಹಣಕಾಸು ವ್ಯವಹಾರವೂ ಸಂಪೂರ್ಣ ಪಾರದರ್ಶಕ. ಆದ್ದರಿಂದ ಎಲ್ಲರೂ ಇಂಥ ಮಹತ್ತರ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಂತರ ಆಸಕ್ತರು ದೇಣಿಗೆಯನ್ನು ಅನ್ ಲೈನ್ ಮೂಲಕ ಪಾವತಿ ಮಾಡಲು ಅವಕಾಶ ಇರುತ್ತದೆ. ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ನೆರವಾಗಲು ಇದೊಂದು ಅವಕಾಶ’ ಎಂದು ಹೇಳಿದರು. ಗಾಯಕ ವಿಜಯ್ ಪ್ರಕಾಶ್ ಕೂಡ ಮಾತನಾಡಿದರು.
Key words: Kalanidhi Sangeetha-3 day –online- tomorrow-DCM -Dr. Ashwath narayan