ಕಲ್ಬುರ್ಗಿ,ಜು,2,2019(www.justkannada.in): ಕಲಬುರಗಿ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆಗೆ ಯೋಜನೆಯೊಂದನ್ನು ರೂಪಿಸಲಾಗಿದ್ದು ಇದಕ್ಕಾಗಿ ರೂ 750 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ದಿ ಸಚಿವರಾದ ಯು.ಟಿ.ಖಾದರ್ ಹೇಳಿದರು.
ನಗರಸಭೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅವಾಹಲು ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯುಟಿ ಖಾದರ್ , ಕಲಬುರಗಿ ನಗರ ವೇಗವಾಗಿ ಬೆಳೆಯುತ್ತಿದ್ದು ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯ ಒದಗಿಸುವುದುಅದರಲ್ಲೂ ಕುಡಿಯುವ ನೀರು ಒದಗಿಸುವುದು ಪ್ರಮುಖವಾಗಿದೆ. ನಿರಂತರ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ರೂ 750 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ನೀರಿನ ಎಲ್ಲ ರೀತಿಯ ಮೂಲಗಳಿಂದ ನೀರನ್ನು ತೆಗೆದುಕೊಂಡು ಸರಬರಾಜು ಮಾಡುವ ಯೋಜನೆ ಇದಾಗಿದ್ದು ಮೂರು ತಿಂಗಳ ಒಳಗಾಗಿ ಯೋಜನೆಗೆ ಚಾಲನೆ ದೊರಕಲಿದ್ದು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣಗೊಳಿಸಲಾಗುವುದು ಎಂದರು. ಈ ಯೋಜನೆಯನ್ನು ಹೊರತುಪಡಿಸಿ ಅಮೃತ ಯೋಜನೆಯಡಿಯಲ್ಲಿ ರೂ 140 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕುಡಿಯುವ ನೀರಿನ ಪೈಪ್ ಲೈಲ್ ಗಳನ್ನು ಅಳವಡಿಸಲಾಗುವುದು ಎಂದರು.
ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯದ 10 ನಗರಗಳಲ್ಲಿ ವೈಜ್ಞಾನಿಕ ನಾಲಾಗಳ ಅಭಿವೃದ್ದಿಗೆ ಹಾಗೂ ಸಮರ್ಪಕ ಯುಜಿಡಿ ವ್ಯವಸ್ಥೆ ಜಾರಿಗೊಳಿಸಲು ಪ್ರತಿ ಜಿಲ್ಲೆಗೆ ರೂ 150 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಯು.ಟಿ ಖಾದರ್ ಭರವಸೆ ನೀಡಿದರು.
ಕಲಬುರಗಿ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾದಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖಾದರ್ ಅವರು, ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಘೋಷಣೆಗೆ ಕೆಲವು ನಿಯಮಾವಳಿಯನ್ನು ರೂಪಿಸಿದೆ. ಮೊದಲ ಹಂತದಲ್ಲಿ ಕೆಲ ನಗರಗಳು ಹಾಗೂ ಎರಡನೆಯ ಹಂತದಲ್ಲಿ ಮತ್ತೆ ಕೆಲ ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಘೋಷಿಸಿದೆ. ಆದರೆ, ಈ ಸಲ ಮತ್ತೊಮ್ಮೆ ಶಿಫಾರಸ್ಸು ಮಾಡಲಾಗುವುದು ಎಂದರು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೇಂದ್ರ ರೂ 100 ಕೋಟಿ ಬಿಡುಗಡೆ ಮಾಡಿದರೆ ರಾಜ್ಯ ಸರಕಾರ ರೂ150 ಕೋಟಿ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ನಗರದ ಸಮರ್ಪಕ ಅಭಿವೃದ್ದಿಗೆ ಸಹಕಾರಿಯಾಗುವ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ನಗರದ ಅಕ್ರಮ ಜಾಗ ಒತ್ತುವರಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಅಕ್ರಮ ಒತ್ತುವರಿ ಕುರಿತು ಸಮೀಕ್ಷೆ ಮಾಡಲಾಗುವುದು. ಜೊತೆಗೆ ಸರಕಾರದ ಮಾನದಂಡಗಳ ಬಗ್ಗೆ ಚರ್ಚೆ ಮಾಡಿ ಅಕ್ರಮ ಅತಿಕ್ರಮಣ ಎಂದು ಯಾವ ಜಾಗವನ್ನು ಕರೆಯಬಹುದು ಹಾಗೂ ಹಾಗೆ ಅಕ್ರಮ ಎಂದು ಗುರುತಿಸುವ ಜಾಗಗಳನ್ನು ಯಾವ ರೀತಿ ತೆರವುಗೊಳಿಸಬೇಕು ಎನ್ನುವುದರ ಕುರಿತು ನಿರ್ಧಾರ ತೆಗೆದಿಕೊಳ್ಳಲಾಗುವುದು. ಇದಕ್ಕೆ ಕನಿಷ್ಟ ನಾಲ್ಕು ವಾರಗಳ ಸಮಯ ಬೇಕಾಗುತ್ತದೆ. ಹಾಗಾಗಿ ಮಾನ್ಯ ನಗರಾಭಿವೃದ್ದಿ ಸಚಿವರು ಆದೇಶ ಹೊರಡಿಸಿದರೆ ಈ ಕ್ರಮ ಚಾಲನೆ ನೀಡಲಾಗುವುದು ಎಂದರು.
ತೀರಾ ಇತ್ತೀಚಿಗೆ ಅಕ್ರಮ ಒತ್ತುವರಿ ಜಾಗವೊಂದನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾದಾಗ ರಾಜಕೀಯ ಒತ್ತಡ ತಂದು ಅಂದಿನ ಪ್ರಕ್ರಿಯೆಯನ್ನು ಮುಂದೂಡಿಸಿ ನಂತರ ಒತ್ತುವರಿದಾರರು ಕೋರ್ಟ್ಗೆ ಹೋದ ವಿಚಾರವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ ಅವರು ಅಕ್ರಮ ಜಾಗಗಳ ಒತ್ತುವರಿ ತೆರವುಗೊಳಿಸಲು ಸ್ಥಳೀಯ ಮಟ್ಟದಲ್ಲಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ, ಸಾರ್ವಜನಿಕರ ಹಾಗೂ ಮಾಧ್ಯಮದ ಸಹಕಾರ ಬೇಕಾಗುತ್ತದೆ ಅಂದಾಗ ಮಾತ್ರ ಇಂತಹ ಪ್ರಮುಖ ಕಾರ್ಯಕ್ರಮಗಳನ್ನು ಸುಲಭವಾಗಿ ಕೈಗೆತ್ತಿಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಪ್ರಮುಖ ಸರಕಾರ ಇಲಾಖೆಗಳ ಹುದ್ದೆಗಳು ಖಾಲಿಯಿರುವುದನ್ನು ಪ್ರಸ್ತಾಪಿಸಿ ಸಚಿವ ಪ್ರಿಯಾಂಕ್ ಖರ್ಗೆ, ವಿವಿಧ ಇಲಾಖೆಗಳಲ್ಲಿ 76 ಕ್ಕೂ ಅಧಿಕ ಪ್ರಮುಖ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳನ್ನು ತುಂಬಲು ಹಾಗೂ ಹಾಗೆ ನೇಮಕವಾದ ಅಧಿಕಾರಿಗಳನ್ನು ಹೈಕ ಭಾಗದಲ್ಲಿ ಕಡ್ಡಾಯವಾಗಿ 10 ವರ್ಷ ಸೇವೆ ಸಲ್ಲಿಸುವಂತೆ ನಿಯಮಾವಳಿ ರೂಪಿಸಲು ಸಿಎಂ ಅವರಿಗೆ ಪತ್ರ ಬರೆಯಲಾಗಿತ್ತು. ನಮ್ಮ ಪತ್ರಕ್ಕೆ ಸ್ಪಂದಿಸಿದರುವ ಸಿಎಂ ಅವರು ಆದೇಶ ಮಾಡಿದ್ದಾರೆ ಎಂದು ನಗರಾಭಿವೃದ್ದಿ ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಶಾಸಕರಾದ ಅಪ್ಪುಗೌಡ ಪಾಟೀಲ್, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಅಂಜುಂ ಪರ್ವೇಜ್, ಕಮೀಷನರ್ ಫೌಜಿಯಾ ತರನ್ನುಮ್ ಸೇರಿದಂತೆ ಅಧಿಕಾರಿಗಳು ಇದ್ದರು.
Key words: kalburgi-release -Rs 750 crore – sustainable –drinking- water –project- UT Khadar