‘ ಡಿ ಬಾಸ್ ‘ ಫ್ಯಾನ್ಸ್ ಘೇರಾವ್ ಘಟನೆ ಬಳಿಕ ರಿಲೀಸ್ ಆಯ್ತು ಜಗ್ಗೇಶ್ ರ ಮತ್ತೊಂದು ವಿಡಿಯೋ …

ಬೆಂಗಳೂರು,ಫೆ.23,2021(www.justkannada.in) : ನನಗೂ ಅಭಿಮಾನಿಗಳ ಸಂಘ ಇದೆ. 162 ಸಂಘಗಳಿವೆ. ಅವರು ಯಾರಿಗೂ ಪ್ರತಿಕ್ರಿಯಿಸದಂತೆ ಹೇಳಿದ್ದೇನೆ. ನಾನು ಒಕ್ಕಲಿಗ ಮನೆತನದಿಂದ ಬಂದವನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ. ನಟರ ನಡುವಿಗೆ ತಂದಿಟ್ಟು ತಮಾಷೆ ನೋಡುವುದು ಬಿಟ್ಟುಬಿಡಿ. ಜನರಿಗೆ ಒಂದು ದಿನ ಇದೆಲ್ಲಾ ಗೊತ್ತಾಗುತ್ತದೆ ಎಂದು ನವರಸ ನಾಯಕ ಜಗ್ಗೇಶ್ ಎಚ್ಚರಿಸಿದ್ದಾರೆ.

jk

ಕನ್ನಡ ಪ್ರಭ ಹಾಗೂ ಸುವರ್ಣ ಟಿವಿಯನ್ನೇ ಪ್ರಮುಖವಾಗಿ ಉದ್ದೇಶಿಸಿ ನಟ ಜಗ್ಗೇಶ್‌ ಈ ಕಟು ಆಕ್ರೋಶದ ಮಾತುಗಳನ್ನಾಡಿರುವ ಸೆಲ್ಫಿ ವಿಡಿಯೋ ಇದೀಗ ವೈರಲ್ ಆಗಿದೆ.

ನಾನೊಬ್ಬ ಆರ್.ಎಸ್.ಎಸ್. ಕಾರ್ಯಕರ್ತ. ಹೊಸದಿಂಗತ ಹಾಗೂ ವಿಕ್ರಮ ಪತ್ರಿಕೆಗಳು ಸಂಘದ ಪತ್ರಿಕೆಗಳು. ಇವಕ್ಕೆ ಪ್ರೋತ್ಸಾಹಿಸಬೇಕಾದದ್ದು ನನ್ನ ಕರ್ತವ್ಯ, ನಾನು ನೂರಲ್ಲ ಸಾವಿರ ಸಾರಿ ಈ ಪತ್ರಿಕೆಗಳ ಬಗ್ಗೆ ಪ್ರಚಾರ ಮಾಡುತ್ತೇನೆ ಎಂದು ಕನ್ನಡ ಪ್ರಭ ಪತ್ರಿಕೆಗೆ ತಿರುಗೇಟು ನೀಡಿದ್ದಾರೆ ನಟ ಜಗ್ಗೇಶ್.

ಮೈಸೂರಿನ ಬನ್ನೂರು ಬಳಿ ಸೋಮವಾರ ನಡೆದ ದರ್ಶನ್ ಫ್ಯಾನ್ಸ್ ಜತೆಗಿನ ಮಾತಿನ ಚಕಮಕಿ ಘಟನೆ ಬಳಿಕ ನಟ ಜಗ್ಗೇಶ್ ಹೇಳಿರುವುದಿಷ್ಟು….
40 ವರ್ಷಗಳಲ್ಲಿ 150 ಸಿನಿಮಾ ಮಾಡಿದ್ದೇನೆ. 29 ಚಿತ್ರಗಳನ್ನು ನಿರ್ಮಿಸಿದ್ದೇನೆ. ಎರಡು ಬಾರಿ ಶಾಸಕ ಆಗಿದ್ದೀನಿ. ಎಲ್ಲೂ ಕೂಡಾ ಹಲ್ಕಟ್‌ ಕೆಲಸ ಮಾಡಿಲ್ಲ. ತಲೆ ಹಿಡಿದಿಲ್ಲ. ಕಳ್ಳತನ ಮಾಡಿಲ್ಲ. ಲಂಚ ತಗೊಂಡಿಲ್ಲ. ಪ್ರಾಮಾಣಿಕವಾಗಿ ಬದುಕಿದ್ದೇನೆ. ಅದು ಮಂತ್ರಾಲಯದ ರಾಯರಿಗೆ ಗೊತ್ತು.

ನನಗೆ ಬುದ್ಧಿಹೇಳಬೇಕಾದವರು ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ ಒಬ್ಬ ನಟ, ಅವನ ಅಭಿಮಾನಿಗಳು ನನ್ನ ಬಳಿ ಬರಲು ಆಗುವುದಿಲ್ಲ. ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನನ್ನು ಅವಮಾನ ಮಾಡಲು ಬರಬೇಡಿ. ಇಂಥ ಸ್ಥಿತಿಗತಿಗಳನ್ನು ಶುರು ಮಾಡಿದರೆ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಶುರುವಾಗುತ್ತದೆ.

ಇವತ್ತು ಒಬ್ಬ ನಟನ ಚಿತ್ರ ಹಿಟ್‌ ಆಯಿತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡುತ್ತಾನೆ. ನಾನೊಬ್ಬನೇ ಉಳಿಯಬೇಕು. ನನ್ನೊಬ್ಬನ ಚಿತ್ರವೇ ಓಡಬೇಕು ಅನ್ನುವುದು ಇದೆ. ಈ ತರಹ ಘೇರಾವ್‌ ಮಾಡೋದು, ತುಳಿಯುವುದು ದರಿದ್ರ ರಾಜಕಾರಣದಲ್ಲಿ ಇದೆ. ಯಾವುದೋ ಒಂದು ಸಣ್ಣ ವಿಷಯವನ್ನಿಟ್ಟುಕೊಂಡು ಜಗ್ಗೇಶ್‌ಗೆ ಅವಮಾನ ಮಾಡುತ್ತೀದ್ದೇವೆ ಅಂತ ನೀವು ಭಾವಿಸಿದ್ದರೆ, ನನಗೆ ಯಾವ ನೋವೂ ಇಲ್ಲ.

ಖಾಸಗಿಯಾಗಿ ಮಾತನಾಡಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಕುತಂತ್ರ ವ್ಯವಸ್ಥೆ ಇದೆ ಎಂದು ಗೊತ್ತಾಗಿದೆ. ನಾನು ತಪ್ಪೇ ಮಾತನಾಡಿಲ್ಲ. ಯಾಕೆ ಹೆದರಿಕೊಳ್ಳಲಿ? ;ಅಲ್ಲಿ ನನಗೆ ಯಾರಾದರೂ ಹೊಡೆಯಲು ಬಂದಿದ್ದರಾ? ಯಾರಿಗೆ ನನ್ನನ್ನು ಮುಟ್ಟುವ ಧೈರ್ಯ ಇದೆಯಾ? ಎಂದು ಗುಡುಗಿರುವ ಜಗ್ಗೇಶ್, ‘ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಈಗ ಜಾಲರಿ ಹಿಡಿಯುತ್ತಿರುವ ನೀವ್ಯಾರೂ ಹುಟ್ಟಿರಲಿಲ್ಲ. ನೀವು ಯಾರಿಗೆ ಬಕೀಟು ಹಿಡೀತಿದ್ದೀರಲ್ಲಾ ಅವರು ಯಾರೂ ಹುಟ್ಟಿರಲಿಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ನಾನು 80ರ ದಶಕದಲ್ಲಿ ಸಿನಿಮಾರಂಗಕ್ಕೆ ಬಂದವನು. ಡಾ.ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಪ್ರಭಾಕರ್‌ ಶಂಕರ್‌ನಾಗ್‌, ಅನಂತನಾಗ್‌ ಅವರ ಜೊತೆ ಹೆಜ್ಜೆ ಹಾಕಿದವನು, ಬದುಕಿದವನು, ನಕ್ಕವನು, ಅತ್ತವನು ನಾನು. ಇವತ್ತಿಗೂ ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಕನ್ನಡಿಗರು ಕಾರಣ.

 kannada-actor-jaggesh-darshan-fans-clash-clarrification-rss-bjp

ಇವತ್ತಿಗೂ ನಾನು ಬೇರೆ ಭಾಷೆಯತ್ತ ಎಡಗಾಲನ್ನೂ ಇಟ್ಟಿಲ್ಲ. ಬೇರೆ ಭಾಷೆಯವರಿಗೆ ಜಾಲರಿ ಹಿಡಿದಿಲ್ಲ. ಕನ್ನಡ ಕನ್ನಡ ಎಂದು ಸತ್ತಿದ್ದೇನೆ ಮುಂದೆ ಕೂಡಾ ಸಾಯುತ್ತೇನೆ. ನಾನು ಕಾಗೆ ಹಾರಿಸುವಂತಿದ್ದರೆ 20 ಬಾರಿ ಶಾಸಕನಾಗುತ್ತಿದ್ದೆ, ಮಂತ್ರಿಯಾಗುತ್ತಿದ್ದೆ. ಬಕೀಟು ಹಿಡಿದಿದ್ದರೆ ಬೂಟು ನೆಕ್ಕಿದ್ದರೆ ನೂರಾರು ಹುದ್ದೆಗಳನ್ನು ತೆಗೆದುಕೊಳ್ಳುತ್ತಿದ್ದೆ’ ಎಂದಿದ್ದಾರೆ.

key words : kannada-actor-jaggesh-darshan-fans-clash-clarrification-rss-bjp