ನವದೆಹಲಿ ವಿಶ್ವ ಪುಸ್ತಕ ಮೇಳದಲ್ಲಿ ‘ಕನ್ನಡ ಪುಸ್ತಕ’ ಬಿಡುಗಡೆ

ನವದೆಹಲಿ,ಫೆಬ್ರವರಿ,12,2025 (www.justkannada.in): ನವದೆಹಲಿಯಲ್ಲಿ ನಡೆದ  ವಿಶ್ವದ ಅತ್ಯಂತ ದೊಡ್ಡ ಪುಸ್ತಕಮೇಳ ʼನವದೆಹಲಿ ವಿಶ್ವ ಪುಸ್ತಕಮೇಳ 2025ʼದಲ್ಲಿ ಕನ್ನಡದ ಯುವ ಲೇಖಕ ಮಹೇಶ ಹಿರೇಮಠ ಅವರ “ಪ್ರಜಾಪ್ರಭುತ್ವದ ರಾಯಭಾರಿಗಳು” ಪುಸ್ತಕ ಬಿಡುಗಡೆಯಾಗಿದೆ.

ಈ ಪುಸ್ತಕವನ್ನು ಪ್ರಧಾನಮಂತ್ರಿ  ಯುವ 2.0 ಯೋಜನೆಯಡಿ  ಇಂಗ್ಲೀಷ್‌ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ 41 ಯುವ ಲೇಖಕರ ಕೃತಿಗಳನ್ನು  ನವದೆಹಲಿಯ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್, ತ್ರಿಪುರಾ ರಾಜ್ಯಪಾಲ ಎನ್.‌ ಧರ್ಮಸೇನ ರೆಡ್ಡಿ, ಕೇಂದ್ರ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ (IAS) ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ ಜೋಶಿ (IAS) ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌,  ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾದ  ಪ್ರೊ. ಮಿಲಿಂದ್ ಸುಧಾಕರ್ ಮರಾಠ, ನ್ಯಾಷನಲ್ ಬುಕ್ ಟ್ರಸ್ಟ್ ನ ನಿರ್ದೇಶರಾದ  ಕರ್ನಲ್‌ ಯುವರಾಜ್ ಮಲಿಕ್ ಅವರು ಬಿಡುಗಡೆಗೊಳಿಸಿದರು.

ಯುವ 2.0 ಯೋಜನೆಗೆ ಆಯ್ಕೆಯಾದ ಏಕೈಕ ಕನ್ನಡ ಯುವಲೇಖಕ :

ಕೇಂದ್ರ ಶಿಕ್ಷಣ ಸಚಿವಾಲಯದಡಿಯಲ್ಲಿ ರೂಪಿಸಲಾದ ಪ್ರಧಾನಮಂತ್ರಿ ಯುವ 2.0 ಯೋಜನೆಗೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳ ಯುವಲೇಖಕರನ್ನು ಆಹ್ವಾನಿಸಲಾಗಿತ್ತು. ನ್ಯಾಷನಲ್‌ ಬುಕ್‌ ಟ್ರಸ್ಟ್‌ ನೇತೃತ್ವದ ತಜ್ಞರ ತಂಡವು ಮೂರು ಹಂತಗಳ ಆಯ್ಕೆ ಪ್ರಕ್ರಿಯೆ ನಂತರ ದೇಶದ 41 ಯುವ ಲೇಖಕರನ್ನು ಈ ಯೋಜನೆಗೆ ಆಯ್ಕೆ ಮಾಡಿತು. ಇದರಲ್ಲಿ ಆಯ್ಕೆಯಾದ ಏಕೈಕ ಕನ್ನಡ ಯುವಲೇಖಕ  ಮಹೇಶ ಹಿರೇಮಠ ಆಗಿದ್ದು, ಅವರ ಕೃತಿಯನ್ನು ದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದೆ.

ಕರ್ನಾಟಕ ಕಾಲೇಜಿನ ಪ್ರತಿಭೆ ..

ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ  ಹಿರೇಮಸಳಿ ಗ್ರಾಮದ ಮಹೇಶ ಹಿರೇಮಠ ಅವರು  ಧಾರವಾಡದ ಕರ್ನಾಟಕ ಕಾಲೇಜಿನಿಂದ  ಪತ್ರಿಕೋಧ್ಯಮ ಹಾಗೂ ಅಪರಾಧಶಾಸ್ತ್ರದಲ್ಲಿ ಪದವಿ, ಮೈಸೂರು ವಿವಿಯಿಂದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ʼಆ ನೆನಪುಗಳುʼ ಎಂಬ ಮೊದಲ ಕಾದಂಬರಿಯನ್ನು ಕಾಲೇಜು ದಿನಗಳಲ್ಲಿಯೇ ಪ್ರಕಟಿಸಿರುತ್ತಾರೆ. ಇದರೊಂದಿಗೆ ಸಾಕ್ಷ್ಯಚಿತ್ರ ನಿರ್ದೇಶನದತ್ತ ಆಸಕ್ತಿ ಬೆಳೆಸಿಕೊಂಡಿರುವ ಇವರ ಮೂರು ಸಾಕ್ಷ್ಯಚಿತ್ರಗಳು ಮುಂಬೈ, ಕೋಲ್ಕತ್ತ ಹಾಗೂ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿವೆ. ವಚನ ಸಾಹಿತ್ಯ ಹಾಗೂ ಇತಿಹಾಸದ ಕುರಿತ ಸಂಶೋಧನೆಯತ್ತ ವಿಶೇಷ ಒಲವು  ಬೆಳೆಸಿಕೊಂಡಿದ್ದಾರೆ.

ರಾಷ್ಟ್ರಪತಿಗಳಿಂದ ಗೌರವ..

ಪಿಎಂ ಯುವ 2.0 ಯೋಜನೆಯಡಿ ಆಯ್ಕೆಯಾದ ದೇಶದ 41 ಯುವಲೇಖಕರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಗೌರವಿಸಿದ್ದು ವಿಶೇಷ. ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯುವಲೇಖಕರೊಂದಿಗೆ ಸಂವಾದ ನಡೆಸಿ ಪ್ರೋತ್ಸಾಹಿಸಿದ್ದರು.

‘ಪ್ರಜಾಪ್ರಭುತ್ವದ ರಾಯಭಾರಿಗಳು’ ಪುಸ್ತಕದ ಕುರಿತು

ವಚನಕಾರರ ಜೀವನ ದರ್ಶನದೊಳಗೆ ಒಡಮೂಡಿರುವ ಪ್ರಜಾತಾಂತ್ರಿಕ ಮೌಲ್ಯಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ನವಸಮಾಜ ಕಟ್ಟುವ ನಿಟ್ಟಿನಲ್ಲಿ ಕನ್ನಡನಾಡಿನ ವಚನಕಾರರು ನಡೆಸಿದ ಚಳುವಳಿ ಭಾರತದ ಮಧ್ಯಯುಗದ ಚರಿತ್ರೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಈ ಚಳುವಳಿ ಅನೇಕ ಆಯಾಮಗಳನ್ನು ಒಳಗೊಂಡಿದ್ದು, ಸಾಮಾಜಿಕ, ಆರ್ಥಿಕ, ಕೌಟುಂಬಿಕ ಹಾಗೂ ರಾಜಕೀಯ ಸ್ಥಿತ್ಯಂತಗಳಿಗೆ ಕಾರಣೀಭೂತವಾಗಿದೆ. ಈ ಚಳುವಳಿಯ ಪ್ರಭಾವ ಶತಮಾನಗಳಿಂದಲೂ ವಿಸ್ತರಣೆಗೊಳ್ಳುತ್ತ ಪ್ರಸ್ತುತ ಕಾಲಘಟ್ಟದ ಚಿಂತನೆಗಳ ಮೇಲೂ ಪ್ರಭಾವನ್ನುಂಟು ಮಾಡುತ್ತಿದ್ದು, ಇದು ವಚನಕಾರರ ಸಾರ್ವಕಾಲಿಕ ಪ್ರಸ್ತುತತೆಯನ್ನು ಸಾರುತ್ತದೆ. ವಚನಕಾರರ ಚಿಂತನೆ ಹಾಗೂ ದೃಷ್ಟಿಕೋನದೊಳಗೆ ಒಡಮೂಡಿರುವ ಪ್ರಜಾತಾಂತ್ರಿಕ ಮೌಲ್ಯಗಳನ್ನು  ಗುರುತಿಸುವ ಪ್ರಯತ್ನವನ್ನು ಈ ಪುಸ್ತಕದ ಮೂಲಕ ಮಾಡಲಾಗಿದೆ.

ವಚನಕಾರರು ತಮ್ಮ ಅನುಭವಗಳನ್ನು ʼಅನುಭಾವʼವನ್ನಾಗಿಸಿ, ನವಸಮಾಜ ರಚನೆಗಾಗಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಇಡೀ ಜಗತ್ತಿಗೆ  ಹೊಸ ಪರಿಕಲ್ಪನೆಯನ್ನು ನೀಡಿ, ಆ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ  ಇಡೀ ಜಗತ್ತಿಗೆ ಸಾರಿದ ಶ್ರೇಯಸ್ಸು ಕನ್ನಡದ ವಚನಕಾರರಿಗೆ ಸಲ್ಲುತ್ತದೆ.  ವಚನಕಾರರು ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಸಮಾಜವಾದ, ವಿಶ್ವಭ್ರಾತೃತ್ವ ಮತ್ತು ಗಣತಂತ್ರದ ಕುರಿತು ಜನಸಾಮಾನ್ಯರಿಗೆ ಅತ್ಯಂತ ಸರಳ ರೀತಿಯಲ್ಲಿ ಹೇಳುವ ಮೂಲಕ ಅವರೊಳಗೆ ಜಾಗೃತಿ ಮೂಡಿಸಿದರು. ಹೀಗಾಗಿಯೇ  ವಚನಕಾರರನ್ನು ಜಗತ್ತಿನ ಮೊದಲ “ಪ್ರಜಾಪ್ರಭುತ್ವದ ರಾಯಭಾರಿ”ಗಳು ಎನ್ನಬಹುದು.

ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ವಿಚಾರಗಳನ್ನು ವಚನಕಾರರೆಲ್ಲರೂ ಹೊಂದಿದ್ದರು ಎಂಬುದಕ್ಕೆ ಅವರ ವಚನಗಳು ಸಾಕ್ಷಿಯಾಗಿವೆ. 850 ವರ್ಷಗಳ ಹಿಂದೆಯೇ ಜಾತಿಭೇದ, ವರ್ಣಭೇದ, ಲಿಂಗಭೇದ ಹೀಗೆ ಎಲ್ಲ ಬಗೆಯ ಬೇಧಗಳನ್ನು ತಿರಸ್ಕರಿಸಿ, ನಮ್ಮ ದೈನಂದಿನ ಜೀವನದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಮಿಡಿತವಿರುವ ಕಲ್ಯಾಣರಾಜ್ಯ ಕಟ್ಟುವ ಪ್ರಬಲವಾದ ಬಯಕೆಯನ್ನು ವಚನಕಾರರು ಹೊಂದಿದ್ದರು. ಸರ್ವಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ ಹೇಗಿರಬೇಕು ಎಂಬ ಸ್ಪಷ್ಟವಾದ ಆಲೋಚನೆಯನ್ನು ವಚನಕಾರರು ಹೊಂದಿದ್ದರು.  ಕನ್ನಡದ ವಚನಕಾರರು ರಚಿಸಿದ ʼವಚನ ಸಾಹಿತ್ಯʼವು  ಪ್ರಭಾವಶಾಲಿ ಆತ್ಮ ವಿಮರ್ಶೆಯ ಮಾಧ್ಯಮವಾಗಿ ಮುಂದಿನ ಪರಂಪರೆಯ ಮೇಲೆ ತನ್ನ ಅಗಾಧವಾದ ಪ್ರಭಾವವನ್ನು ಬೀರಿದೆ.  ಈ ಸಾಹಿತ್ಯ ಉಪದೇಶಕ್ಕಾಗಿರುವ ಅಥವಾ ಧಾರ್ಮಿಕ ನೀತಿ ಬೋಧಿಸುವ, ಧರ್ಮಪ್ರಚಾರ ಮಾಡುವ ಸಾಹಿತ್ಯವಲ್ಲ.

12ನೆಯ ಶತಮಾನದಲ್ಲಿನ ಕೆಳವರ್ಗದವರು ಹಾಗೂ ಮಹಿಳೆಯರನ್ನೂ ಒಳಗೊಂಡಂತೆ ನವಸಮಾಜ  ರಚಿಸುವ ಕನಸು ಕಂಡವರ ಅನುಭಾವದ ಸಾಹಿತ್ಯವಾಗಿದೆ. ವಚನಕಾರರು ಇದನ್ನು ಅಂದು ಸಾಹಿತ್ಯವೆಂದಾಗಲಿ, ಶಾಸ್ತ್ರವೆಂದಾಗಲಿ ರಚಿಸಲಿಲ್ಲ. ಶತಮಾನಗಳಿಂದ ಅನುಭವಿಸಿದ ಜೀವನಾನುಭವನ್ನು ಅನುಭಾವ ವಾಣಿಯಾಗಿಸಿ, ಅದಕ್ಕೆ ಅಕ್ಷರ ರೂಪ ನೀಡಿದ್ದಾರೆ. ಸಮಾಜದ ಸಾಮಾನ್ಯರೆಲ್ಲರೂ ಒಂದುಗೂಡಿ ಸಮಾಜದ ಪ್ರತಿಯೊಂದು ದೃಷ್ಟಿಕೋನದ ಕುರಿತು ಚರ್ಚಿಸಿ, ಚಿಂತಿಸುವುದರ ಸಾಕಾರ ರೂಪವೇ ವಚನ ಸಾಹಿತ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಪಂಡಿತರಾಗಿರದೆ, ಸಾಮಾನ್ಯ ಕೆಳವರ್ಗಕ್ಕೆ ಸೇರಿದವರಾಗಿದ್ದರು. ಇಂತಹ ಜನರಲ್ಲಿ ಅಪಾರವಾದ ಪ್ರಜಾತಾಂತ್ರಿಕ  ವಿಚಾರಧಾರೆಗಳು ಸಹಜವಾಗಿ ಮೂಡಿಬಂದಿವೆ. ವಚನಕಾರರ ಚಿಂತನೆಗಳು ಅನೇಕ ದೃಷ್ಟಿಯಿಂದಲೂ ವಿಶ್ವಮಾನ್ಯವಾಗಿವೆ. ಪ್ಲೇಟೋನ ಚಿಂತನೆಗಳು ಮತ್ತು ಬುದ್ಧನ ಸಂಘಜೀವನಕ್ರಮ ಬಿಟ್ಟರೆ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. ಆದರೆ ಮಧ್ಯಯುಗದಲ್ಲಿ ನಡೆಯುತ್ತಿದ್ದ ಪರಕೀಯರ ಆಕ್ರಮಣಗಳ ನಡುವೆಯೇ ವಚನಕಾರರು ಪ್ರಜಾಪ್ರಭುತ್ವದ ಕನಸು ಕಂಡರು, ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತುಂಬ ಬಯಸಿದರು. ಹೀಗಾಗಿಯೇ ವಚನ ಸಾಹಿತ್ಯವನ್ನು ಅನೇಕ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕಿದೆ. ವಚನಕಾರರು ಪ್ರತಿಪಾದಿಸಿದ ಪ್ರಜಾತಾಂತ್ರಿಕ ಮೌಲ್ಯಗಳ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ವಚನ ಸಾಹಿತ್ಯವನ್ನು ಆಧ್ಯಾತ್ಮಿಕ ಅಥವಾ ಧಾರ್ಮಿಕ ಸಾಹಿತ್ಯವೆಂದು ಕಡೆಗಣಿಸುವ ಪ್ರಯತ್ನಗಳು ನಡೆದಿವೆ. ಆದರೆ ಸೂಕ್ಷ್ಮ ಸಂವೇದನೆಯ ಮೂಲಕ ವಚನಕಾರರು ಪ್ರತಿಪಾದಿಸಿದ ʼಕಾಯಕʼ  ʼದಾಸೋಹʼ ʼಪ್ರಸಾದʼ ʼಜಂಗಮʼ ʼಲಿಂಗʼ ʼಭಕ್ತಿʼ ʼಶರಣʼ ಪರಿಕಲ್ಪನೆಗಳನ್ನು ಅಧ್ಯಯನ ಮಾಡಿದರೆ, ವಚನಕಾರರು  ಸಾರಿದ ಪ್ರಜಾತಾಂತ್ರಿಕ ಮತ್ತು ನೈತಿಕ ಮೌಲ್ಯಗಳು ಅರ್ಥವಾಗುತ್ತವೆ ಎಂಬ ಆಶಯವನ್ನು ಪುಸ್ತಕವು ಹೊಂದಿದೆ.

ನ್ಯಾಷನಲ್ ಬುಕ್ ಟ್ರಸ್ಟ್ನ ಪ್ರಕಟಣೆ ವಿಭಾಗದ ಮುಖ್ಯಸ್ಥ ಕುಮಾರ್‌ ವಿಕ್ರಮ್‌, ಕನ್ನಡ ವಿಭಾಗದ ಸಂಪಾದಕಿ ಹೇಮಶ್ರಿ ಚಂದ್ರಶೇಖರ್‌ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯ್‌ ಕುಮಾರ್‌ ಇರ್ವತ್ತೂರು ಅವರ ಮಾರ್ಗದರ್ಶನದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

Key words: Kannada book, launch, New Delhi, World Book Fair